ಹೊಸದಿಲ್ಲಿ: ಪಾಕಿಸ್ತಾನದ ಭಯೋತ್ಪಾದಕರ ವಿರುದ್ಧ ಭಾರತೀಯ ಸೇನೆ ನಡೆಸಿದ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯಲ್ಲಿ ರಷ್ಯಾ ಮತ್ತು ಭಾರತ ಜಂಟಿಯಾಗಿ ಅಭಿವೃದ್ಧಿಪಡಿಸಿದ ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ತಾಕತ್ತು ಏನು ಎಂದು ಇಡೀ ವಿಶ್ವಕ್ಕೆ ತಿಳಿದಿದೆ. ಉಗ್ರ ದೇಶ ಪಾಕಿಸ್ತಾನದ ಡ್ರೋನ್, ಮಿಸೈಲ್‌ಗಳನ್ನು ನಮ್ಮ ಎಸ್-400 ಸುದರ್ಶನ ಚಕ್ರ ಸರ್ವ ನಾಶ ಮಾಡಿದೆ. ಎಸ್-400 ಅನ್ನು ಸುದರ್ಶನ ಚಕ್ರ ಎನ್ನುವ ಹೆಸರಿನಿಂದ ಭಾರತೀಯ ಸೈನ್ಯದಲ್ಲಿ ಕರೆಯಲಾಗುತ್ತೆ. ಇದರ ಸಾಮರ್ಥ್ಯವನ್ನು ನೋಡಿ ಪಾಕ್ ಮತ್ತು ಚೀನಾ ದೇಶಗಳು ಬೆಚ್ಚಿ ಬಿದ್ದಿವೆ.
ಎಸ್-400ನ ಮುಂದುವರಿದ ಅಪ್‌ಡೇಟ್ ಆವೃತ್ತಿ ಎಸ್-500 ಅನ್ನು ಭಾರತದ ನಂಬಿಕಾರ್ಹವಾದ ರಾಷ್ಟ್ರ ರಷ್ಯಾ ಸಿದ್ಧಪಡಿಸಿದೆ. ಎಸ್-400ಗಿಂತ ಎಸ್-500 ಅತ್ಯಂತ ಶಕ್ತಿಶಾಲಿ ಏರ್ ಡಿಫೆನ್ಸ್ ಸಿಸ್ಟಮ್ ಆಗಿದೆ. ರಷ್ಯಾ ದೇಶ ಇದನ್ನು ಭಾರತದ ಜೊತೆಗೂಡಿ ನಿರ್ಮಿಸಿ ಭಾರತಕ್ಕೆ ವಿತರಿಸುವ ಪ್ರಸ್ತಾಪವನ್ನು ಸಲ್ಲಿಸಿದೆ ಎಂದು ವರದಿಯಾಗಿದೆ. ಎಸ್-500 ಮಿಸೈಲ್, ಡ್ರೋನ್ ಜೊತೆಗೆ ಉಪಗ್ರಹಗಳನ್ನೂ ಸಹ ಹೊಡೆದು ಉರುಳಿಸುವ ಅಗಾಧವಾದ ಸಾಮರ್ಥ್ಯವನ್ನು ಹೊಂದಿದೆ ಎನ್ನಲಾಗುತ್ತಿದೆ. ಎಸ್-500 ಭಾರತದ ಜೊತೆ ಜಂಟಿಯಾಗಿ ಉತ್ಪಾದಿಸುವ, ರಷ್ಯಾ ನೀಡಿರುವ ಆಫರ್ ಏನಾದರೂ ನಮ್ಮ ರಾಷ್ಟ್ರ ಒಪ್ಪಿದರೆ ಪಾಕಿಸ್ತಾನ ಮತ್ತು ಚೀನಾದಂತಹ ಪಕ್ಕದ ಶತ್ರು ದೇಶಗಳಿಗೆ ರಾತ್ರಿಯ ನಿದ್ದೆ ಬರುವುದೂ ಸಹ ಕಷ್ಟವಾಗಬಹುದು.
ಭಾರತದ ಸುದರ್ಶನ ಚಕ್ರ ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಪಾಕಿಸ್ತಾನದ ಡ್ರೋನ್‌ಗಳನ್ನು, ಮಿಸೈಲ್‌ಗಳನ್ನು ಹೊಡೆದುರುಳಿಸಿ ಜಗತ್ತಿನ ಎಲ್ಲಾ ದೇಶಗಳ ಹುಬ್ಬೇರುವಂತೆ ಮಾಡಿದೆ. ಇದೇ ಸುದರ್ಶನ ಚಕ್ರದ ಹೆದರಿಕೆಯಿಂದ ಪಾಕಿಸ್ತಾನ ಭಾರತದ ಜೊತೆಗೆ ಕದನ ವಿರಾಮ ಮಾಡಿಕೊಂಡಿದ್ದು ಎನ್ನುವುದು ನಿಮಗೆ ನೆನಪಿರಲಿ.
ಇಂತಹ ಎಸ್-೪೦೦ ಸಾಮರ್ಥ್ಯಕ್ಕಿಂತಲೂ ಅಗಾಧವಾದ ಸಾಮರ್ಥ್ಯ ಇರುವ ಎಸ್-400ನ ಅಪ್‌ಡೇಟೆಡ್ ವರ್ಷನ್ ಎಸ್-500 ಶೀಘ್ರದಲ್ಲೇ ಭಾರತಕ್ಕೆ ಬರಲಿದೆ ಎಂದು ವರದಿಯಾಗಿದೆ. ಕಳೆದ ವರ್ಷ ಪ್ರಧಾನಿ ಮೋದಿಯವರು ರಷ್ಯಾಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಎಸ್-500 ಏರ್ ಡಿಫೆನ್ಸ್ ಸಿಸ್ಟಮ್ ಅನ್ನು ಭಾರತದಲ್ಲಿ ಜಂಟಿಯಾಗಿ ತಯಾರಿಸುವ ಒಂದು ಅದ್ಭುತವಾದ ಆಫರ್ ಅನ್ನು ನೀಡಿದ್ದರು. ಮೂಲಗಳ ಪ್ರಕಾರ ಈಗ ಭಾರತ ಆ ಆಫರ್ ಒಪ್ಪಿಕೊಳ್ಳುವ ಸಾಧ್ಯತೆ ಇದ್ದು, ಎಸ್-500 ಭಾರತದ ನೆಲದಲ್ಲಿ ರಷ್ಯಾ ಮತ್ತು ಭಾರತದ ಸಹಯೋಗದೊಂದಿಗೆ ಜಂಟಿಯಾಗಿ ಉತ್ಪಾದನೆಯಾಗಲಿದೆ ಎಂದು ಮಾಹಿತಿ ಸಿಕ್ಕಿದೆ.
ಜಗತ್ತಿನ ಅತ್ಯಂತ ಶಕ್ತಿಶಾಲಿ ಬಾಹುಬಲಿ ಈ ಎಸ್-500 ಏರ್ ಡಿಫೆನ್ಸ್ ಸಿಸ್ಟಮ್
ಅಮೇರಿಕಾ, ಇಸ್ರೇಲ್, ಉಕ್ರೇನ್ ಮುಂತಾದ ದೇಶಗಳು ಬಳಸುವ ಏರ್ ಡಿಫೆನ್ಸ್ ಸಿಸ್ಟಮ್‌ಗಳಾದ ಥಾಡ್, ಪೆಟ್ರಿಯಾಟ್‌ಗಳಿಗೆ ಹೋಲಿಸಿದರೆ ರಷ್ಯಾದ ಎಸ್-500 ಹತ್ತು ಪಟ್ಟು ಶಕ್ತಿಶಾಲಿಯಾದ ವಾಯು ರಕ್ಷಣಾ ವ್ಯವಸ್ಥೆಯಾಗಿದೆ. ಎಸ್-500ಗೆ ಪ್ರೊಮೀತಿಯಸ್ ಎನ್ನುವ ಹೆಸರಿನಿಂದ ಸಹ ಕರೆಯಲಾಗುತ್ತೆ.
ಇದು ಹೈಪರ್‌ಸಾನಿಕ್ ಕ್ರೂಸ್ ಕ್ಷಿಪಣಿಗಳು, ಖಂಡಾಂತರ ಬ್ಯಾಲಿಸ್ಟಿಕ್ ಕ್ಷಿಪಣಿಗಳು, ಫೈಟರ್ ಜೆಟ್‌ಗಳು (ಯುದ್ಧ ವಿಮಾನಗಳು), ಭೂಮಿಯ ಸಮೀಪದಲ್ಲಿ ಇರುವ ಉಪಗ್ರಹಗಳನ್ನು ಹೊಡೆದು ಹಾಕುವ ಅಪ್ರತಿಮವಾದ ಸಾಮರ್ಥ್ಯವನ್ನು ಹೊಂದಿದೆ. ಎಸ್-400ಗೆ ಹೋಲಿಸಿದರೆ ಇದರ ವೇಗ, ಕಾರ್ಯಕ್ಷಮತೆ ಮತ್ತು ಸಾಮರ್ಥ್ಯ ಬಹಳಷ್ಟು ಹೆಚ್ಚಾಗಿದೆ. ಇದರ ಸಾಮರ್ಥ್ಯದ ಮುಂದೆ ಜಗತ್ತಿನ ಯಾವುದೇ ವಾಯು ರಕ್ಷಣಾ ವ್ಯವಸ್ಥೆಯೂ ಸಹ ನಿಲ್ಲಲು ಸಾಧ್ಯವಿಲ್ಲ.
S-500 ಮಿಸೈಲ್ ಸಿಸ್ಟಮ್‌ನ ಪ್ರಮುಖ ಫೀಚರ್‌ಗಳು
- 2000 ಕಿಮೀ ದೂರದಲ್ಲಿ ಶತ್ರು ದೇಶಗಳ ಟಾರ್ಗೆಟ್‌ಗಳನ್ನು ಗುರುತಿಸುತ್ತದೆ.
- 600 ಕಿಮೀ ವರೆಗಿನ ವ್ಯಾಪ್ತಿಯಲ್ಲಿ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹೊಡೆದುರುಳಿಸುತ್ತದೆ.
- 500 ಕಿಮೀ ವರೆಗಿನ ವ್ಯಾಪ್ತಿಯಲ್ಲಿ ಹೈಪರ್‌ಸಾನಿಕ್ ಕ್ರೂಸ್ ಕ್ಷಿಪಣಿಗಳನ್ನು ನಾಶ ಮಾಡುತ್ತದೆ.
- ಇದು ಭೂಮಿಯ ಮೇಲ್ಮೈಗೆ ಹತ್ತಿರವಿರುವ ಉಪಗ್ರಹಗಳನ್ನು ಹೊಡೆದು ನಾಶ ಮಾಡುವ ಸಾಮರ್ಥ್ಯವನ್ನು ಹೊಂದಿದೆ.
ಎಸ್-500 3 ರಿಂದ 4 ಸೆಕೆಂಡುಗಳಷ್ಟು ತ್ವರಿತ ವೇಗದಲ್ಲಿ ಪ್ರತಿಕ್ರಿಯೆ ನೀಡುವ ಶಕ್ತಿಯನ್ನು ಹೊಂದಿದೆ. ಎಸ್-400 ವಾಯು ರಕ್ಷಣಾ ವ್ಯವಸ್ಥೆಯ ಪ್ರತಿಕ್ರಿಯಾ ಸಮಯ ಸುಮಾರು 9 ರಿಂದ 10 ಸೆಕೆಂಡುಗಳು. ಅಂದರೆ ಎಸ್-400ಗೆ ಹೋಲಿಕೆ ಮಾಡಿದರೆ ಎಸ್-500 ಅತೀ ಬೇಗ ಪ್ರತಿಕ್ರಿಯೆ ನೀಡುವ ಸಾಮರ್ಥ್ಯ ಹೊಂದಿದೆ.
ಇದರ ಒಂದು ಯೂನಿಟ್ ಬೆಲೆ 2.5 ಬಿಲಿಯನ್ ಡಾಲರ್‌ನಿಂದ 3 ಬಿಲಿಯನ್ ಡಾಲರ್ ಆಗಬಹುದು ಎಂದು ಅಂದಾಜಿಸಲಾಗಿದೆ. ರಷ್ಯಾ ಭಾರತದ ಮಿತ್ರ ದೇಶವಾಗಿದ್ದು ಮತ್ತಷ್ಟು ಕಡಿಮೆ ಬೆಲೆಗೆ ಈ ವಾಯು ರಕ್ಷಣಾ ವ್ಯವಸ್ಥೆಯನ್ನು ಭಾರತಕ್ಕೆ ನೀಡಿದರೂ ಆಶ್ಚರ್ಯ ಪಡಬೇಕಾಗಿಲ್ಲ.
ಎಸ್-500 ವಾಯು ರಕ್ಷಣಾ ವ್ಯವಸ್ಥೆಯ ಒಂದು ಘಟಕ ಲಾಂಗ್ ರೇಂಜ್ ರಾಡಾರ್, ಕಮಾಂಡ್ ವೆಹಿಕಲ್, ಲಾಂಚರ್ ಹಾಗೂ ಎಂಗೆಜ್‌ಮೆಂಟರ್ ರಾಡಾರ್ ಅನ್ನು ಹೊಂದಿರಲಿದೆ. ಇದರಲ್ಲಿ ತಲಾ 10 ಲಾಂಚರ್‌ಗಳು ಇರಲಿದ್ದು, ಒಂದು ಲಾಂಚರ್‌ನಿಂದ ಒಂದು ಗುರಿಗೆ ಏಕಕಾಲಕ್ಕೆ ಎರಡು ಮಿಸೈಲ್‌ಗಳನ್ನು ಉಡಾಯಿಸಬಹುದಾಗಿದೆ. ಇದರ ಜೊತೆಗೆ ರಾಡಾರ್, ಕಮಾಂಡ್ ಸೆಂಟರ್ ಕೂಡ ಇರಲಿದ್ದು, ಅವುಗಳಿಗೂ ಸಹ ಪ್ರತ್ಯೇಕವಾದ ವಾಹನಗಳು ಇರಲಿವೆ ಎಂದು ವರದಿಯಾಗಿದೆ.
ಭಾರತ-ರಷ್ಯಾ ಸಂಯೋಗದಲ್ಲಿ ರಕ್ಷಣಾ ಕ್ಷೇತ್ರದಲ್ಲಿ ಮತ್ತೊಂದು ಮಹತ್ವದ ಹೆಜ್ಜೆ
ಆಪರೇಷನ್ ಸಿಂಧೂರ್ ನಂತರ ಇಡೀ ಜಗತ್ತೇ ಮಾತನಾಡಿಕೊಳ್ಳುತ್ತಿರುವ ಭಾರತ-ರಷ್ಯಾದ ಸಹಯೋಗದಲ್ಲಿ ತಯಾರಿಸಲಾಗಿದ್ದ ಬ್ರಹ್ಮೋಸ್ ಕ್ಷಿಪಣಿಯ ರೀತಿ S-500 ಕ್ಷಿಪಣಿ ವ್ಯವಸ್ಥೆಯನ್ನೂ ಸಹ ಭಾರತ ಮತ್ತು ರಷ್ಯಾ ದೇಶಗಳು ಜಂಟಿಯಾಗಿ ಉತ್ಪಾದಿಸಲಿವೆ ಎಂದು ಹೇಳಲಾಗಿದೆ. 2024 ರಲ್ಲಿ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ರಷ್ಯಾಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಈ ಏರ್ ಡಿಫೆನ್ಸ್ ಸಿಸ್ಟಮ್ ಅನ್ನು ಜಂಟಿ ಸಹಯೋಗದೊಂದಿಗೆ ಉತ್ಪಾದನೆ ಮಾಡುವ ಪ್ರಸ್ತಾವನೆಯನ್ನು ರಷ್ಯಾದಿಂದ ನೀಡಲಾಗಿತ್ತು.