ಭಾರತದ ವಿರುದ್ಧ ಪಾಕಿಸ್ತಾನಕ್ಕೆ ಡ್ರೋನ್‌ಗಳನ್ನು ಪೂರೈಕೆ ಮಾಡಿ ಭಾರತಕ್ಕೆ ಮೋಸ ಮಾಡಿದ ಟರ್ಕಿ

By ಸುಖೇಶ್ ಶಾನಭಾಗ್ Published: Thursday, May 15, 2025, 10:15 [IST]

Turkey Backstabed India by supplying drones to Pakistan

ಟರ್ಕಿ: ಭಾರತದ ಆಪರೇಷನ್ ಸಿಂಧೂರ್ ವಿರುದ್ಧ ಪಾಕಿಸ್ತಾನಕ್ಕೆ ಭಾರೀ ಡ್ರೋನ್ ಮತ್ತು ಯುದ್ಧದ ಸಾಮಗ್ರಿಗಳ ಪೂರೈಕೆಗೆ ಸಹಾಯ ಮಾಡಿದ್ದ ಕಪಟ ದೇಶ ಟರ್ಕಿಯ ವಂಚನೆ ಈಗ ಜಗತ್ತಿನ ಮುಂದೆ ಬಟಾ ಬಯಲಾಗಿದೆ.

ತಾನು ಭಾರತದ ಮಿತ್ರ ರಾಷ್ಟ್ರ ಎಂದು ಹೇಳಿಕೊಳ್ಳುತ್ತಲೇ ಟರ್ಕಿ ಉಂಡ ಮನೆಗೆ ದ್ರೋಹ ಬಗೆದಿದೆ. ಭಾರತದ ಪ್ರವಾಸಿಗರು, ಸಿನಿಮಾ ಶೂಟಿಂಗ್ ಕೆಲಸಗಳು, ಆಮದು - ರಫ್ತು, ವ್ಯಾಪಾರ - ವ್ಯವಹಾರಗಳಿಂದ ವರ್ಷಕ್ಕೆ ಕೋಟ್ಯಂತರ ರೂಪಾಯಿಯ ಲಾಭಗಳಿಸುವ ಟರ್ಕಿ, ಈಗ ಅದೇ ಹಣದ ಸಹಾಯದಿಂದ ಡ್ರೋನ್ ಗಳನ್ನು, ಯುದ್ಧ ಸಾಮಗ್ರಿಗಳನ್ನು ತಯಾರಿಸಿ ಆತಂಕಿಗಳ ದೇಶ ಪಾಕಿಸ್ತಾನಕ್ಕೆ ಸರಬರಾಜು ಮಾಡಿ ಭಾರತದ ವಿರುದ್ಧವೇ ತನ್ನ ಬಾಲ ಬಿಚ್ಚುತ್ತಿದೆ. ಇದಕ್ಕೇ ಉಂಡ ಮನೆಗೆ ದ್ರೋಹ ಬಗೆಯುವ ಕೆಲಸ ಅಂತ ಹೇಳೋದು. 

ಕಪಟಿ ದೇಶ ಟರ್ಕಿಯ ಒಂದೊಂದೇ ವಿದ್ರೋಹಗಳು ಈಗ ಜಗತ್ತಿನ ಎದುರು ಬಯಲಾಗುವ ಸಮಯ ಬಂದಿದೆ. ಅಗತ್ಯ ಹಾಗೂ ಸಂಕಷ್ಟದಂತಹ ಪರಿಸ್ಥಿತಿಗಳಲ್ಲಿ ಇದೇ ಟರ್ಕಿ ದೇಶ ಭಾರತದ ಸಹಾಯ ಪಡೆದುಕೊಂಡಿತ್ತು. ಆದರೆ ಈಗ ಭಾರತದ ಬೆನ್ನಿಗೆ ಹಿಂದಿನಿಂದ ಚೂರಿ ಹಾಕುವಂತಹ ಮನೆಹಾಳು ಕೆಲಸವನ್ನು ಮಾಡಿದೆ. 

ಭಾರತ ದೇಶ ಪಾಕಿಸ್ತಾನದ ಭಯೋತ್ಪಾದನೆಯ ವಿರುದ್ಧ ನಡೆಸಿದ್ದ ಆಪರೇಷನ್‌ ಸಿಂಧೂರ್ ಕಾರ್ಯಾಚರಣೆಯಲ್ಲಿ ಟರ್ಕಿಯ ಇಬ್ಬರು ಮಿಲಿಟರಿ ಸಿಬ್ಬಂದಿಗಳು ಸಾವನ್ನಪ್ಪಿದ್ದಾರೆ ಎನ್ನುವ ಆಘಾತಕಾರಿ ಅಂಶ ಇದೀಗ ಟರ್ಕಿಯ ಉದ್ದೇಶವನ್ನು ಸಾಕ್ಷಿ ಸಮೇತ ಜಗಜ್ಜಾಹೀರು ಮಾಡಿದೆ. 

ಜಮ್ಮು ಕಾಶ್ಮೀರದ ಪಹಲ್ಗಾಮ್ ಅಲ್ಲಿ ಉಗ್ರರು ನಡೆಸಿದ ಕುಕೃತ್ಯಕ್ಕೆ ಪ್ರತೀಕಾರವಾಗಿ ಭಾರತೀಯ ಸೇನೆ ಪಾಕಿಸ್ತಾನದ ವಿರುದ್ಧ ಭಯೋತ್ಪಾದಕರನ್ನು ಹೆಡೆಮುರಿ ಕಟ್ಟಲು ಆಪರೇಷನ್ ಸಿಂಧೂರ್ ಕಾರ್ಯಾಚರಣೆ ನಡೆಸಿತ್ತು. ಅದರ ನಂತರ ನಡೆದ ಸನ್ನಿವೇಶದಲ್ಲಿ ಟರ್ಕಿ ದೇಶ ಪಾಕಿಸ್ತಾನಕ್ಕೆ ಸಹಾಯ ಮಾಡಿದೆ. ಇದರ ಮೂಲಕ ತಾನು ಭಯೋತ್ಪಾದನೆಗೆ ಮತ್ತು ಉಗ್ರವಾದಿಗಳಿಗೆ ಸಹಾಯ ಮಾಡುವ ದೇಶ ಎಂದು ಸಾಭೀತು ಪಡಿಸಿದೆ. 

ಈ ವಿಷಯ ಬೆಳಕಿಗೆ ಬಂದಾಗ ಮೊದ ಮೊದಲು ನಾವು ಪಾಕಿಸ್ತಾನಕ್ಕೆ ಯಾವುದೇ ಸಹಾಯವನ್ನು ಮಾಡಿಲ್ಲ ಎಂದು ನಾಟಕವಾಡಿದ್ದ ಟರ್ಕಿ, ನಂತರ ಪಾಕಿಸ್ತಾನದ ಬೆನ್ನಿಗೆ ನಿಂತು ಮಾಡಿದ ಸಹಾಯಗಳು ಒಂದೊಂದಾಗಿ ಬಹಿರಂಗವಾಗುತ್ತಿವೆ. 

ಪಾಕಿಸ್ತಾನ ಸೇನೆಗೆ 350 ಡ್ರೋನ್ ಪೂರೈಕೆ ಮಾಡಿದ ಟರ್ಕಿ

Turkey Backstabed India by supplying drones to Pakistan

ಪಾಕ್ ಭಾರತದ ಮೇಲೆ ಪ್ರಯೋಗಿಸಿದ್ದ ಬಹುಪಾಲು ಡ್ರೋನ್‌ಗಳನ್ನು ಇದೇ ಟರ್ಕಿ ದೇಶ ಪೂರೈಕೆ ಮಾಡಿದೆ. ಟರ್ಕಿ ಬರೋಬ್ಬರಿ 350 ಡ್ರೋನ್‌ಗಳನ್ನು ಪಾಪಿ ಪಾಕಿಸ್ತಾನಕ್ಕೆ ನೀಡಿದೆ. ಇಷ್ಟೇ ಅಲ್ಲದೆ ಪಾಕಿಸ್ತಾನಕ್ಕೆ ಸಹಾಯವಾಗಲಿ ಎಂದು ಆ ಡ್ರೋನ್‌ಗಳನ್ನು ಉಪಯೋಗಿಸುವ ತರಬೇತಿ ಮತ್ತು ತನ್ನ ಡ್ರೋನ್ ಆಪರೇಟರ್‌ಗಳನ್ನೂ ಸಹ ಟರ್ಕಿ ದೇಶ ನೀಡಿದೆ. ಆಪರೇಷನ್ ಸಿಂಧೂರ್ ನಂತರ ನಡೆದ ಭಾರತೀಯ ಸೈನ್ಯದ ಪತ್ರಿಕಾಗೋಷ್ಠಿಯಲ್ಲಿ ಪಾಕಿಸ್ತಾನದಿಂದ ಬಂದ ಟರ್ಕಿ ನಿರ್ಮಿತ ಡ್ರೋನ್‌ಗಳನ್ನು ಕೆಡವಿ ನಾಶ ಮಾಡಿದ್ದೇವೆ ಎಂದು ಭಾರತೀಯ ಸೇನೆ ದೃಢಪಡಿಸಿತ್ತು. ಟರ್ಕಿಯ ಈ ಮುಂದೊಂದು ಹಿಂದೊಂದು ಆಟ ಆಡುವ ಕೆಲಸದ ವಿಷಯವನ್ನು ಕೇಳಿದಾಗಲೇ ಬಹುತೇಕ ಭಾರತೀಯರು ಆಕ್ರೋಶಗೊಂಡಿದ್ದರು. 

ಭಾರತೀಯ ಸೇನೆಯು ಪಾಕಿಸ್ತಾನ ಹಾಗೂ ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿದ್ದ (ಪಿ.ಓ.ಕೆ.) ಉಗ್ರರ 9 ಅಡಗು ತಾಣಗಳನ್ನು ನಾಶಮಾಡಿತ್ತು. ಇದರ ನಂತರ ನಡೆದ ಕಾರ್ಯಾಚರಣೆಯಲ್ಲಿ ಟರ್ಕಿಯ ಇಬ್ಬರು ಮಿಲಿಟರಿ ಡ್ರೋನ್‌ ಆಪರೇಟರ್‌ಗಳು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಇದರ ಜೊತೆಗೆ ಟರ್ಕಿ ದೇಶವು ಪಾಕಿಸ್ತಾನಕ್ಕೆ ಬರೀ ಶಸ್ತ್ರಾಸ್ತ್ರಗಳನ್ನು ನೀಡಿದ್ದು ಮಾತ್ರವಲ್ಲ, ತನ್ನ  ಸಿಬ್ಬಂದಿಯನ್ನೂ ನೀಡಿದೆ ಎನ್ನುವ ಗಂಭೀರ ಆರೋಪ ಅದರ ವಿರುದ್ಧ ಕೇಳಿ ಬಂದಿದೆ. 

ಟರ್ಕಿ ದೇಶದಲ್ಲಿ ಭೂಕಂಪ ಮತ್ತು ಕೋವಿಡ್ ಬಂದಾಗ  ಭಾರತ ದೇಶ ಸ್ವಂತ ಒಡಹುಟ್ಟಿದ ಅಣ್ಣನಂತೆ ಕೈ ಹಿಡಿದು ಅದಕ್ಕೆ ಸಹಾಯ ಮಾಡಿತ್ತು. ಆದರೆ ಕಷ್ಟ ಕಾಲದಲ್ಲಿ ಸಹಾಯ ಪಡೆದು, ಈಗ ತನ್ನ ಇನ್ನೊಂದು ಮುಖವನ್ನು ತೋರಿಸಿರುವ ಟರ್ಕಿ ಭಾರತಕ್ಕೆ ದ್ರೋಹ ಎಸಗಿದೆ. 

ಟರ್ಕಿಯ ಸಲಹೆಗಾರರು ಮತ್ತು ಮಿಲಿಟರಿ ಡ್ರೋನ್‌ ಆಪರೇಟರ್‌ಗಳು ಆಪರೇಷನ್ ಸಿಂಧೂರ್  ನಂತರ ಭಾರತದ ಮೇಲೆ ಡ್ರೋನ್ ದಾಳಿ ವ್ಯವಸ್ಥಿತವಾಗಿ ನಡೆಸಲು ಪಾಕಿಸ್ತಾನದ ಸೇನಾ ಅಧಿಕಾರಿಗಳೊಂದಿಗಿದ್ದರು ಎಂದು ದೃಶ್ಯ ಮಾಧ್ಯಮಗಳು ವರದಿ ಮಾಡಿವೆ. ಭಾರತದ ವಾಯುಪಡೆಯ ನೆಲೆಗಳು ಮತ್ತು ಶಸ್ತ್ರಾಸ್ತ್ರ ಸರಬರಾಜು ಕೇಂದ್ರಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲು ಪಾಕ್‌ ಮುಂದಾಗಿತ್ತು. ಇದಕ್ಕೆ ಟರ್ಕಿ ನಿರ್ಮಿತ ಡ್ರೋನ್‌ ಬಳಸಲಾಗಿದೆ ಎಂದು ವರದಿಯಾಗಿದೆ.

ಇದರ ಜೊತೆಗೆ ಇತ್ತೀಚಿನ ವರ್ಷಗಳಲ್ಲಿ ಪಾಕಿಸ್ತಾನದ ಜೊತೆಗೆ ರಕ್ಷಣಾ ಬಾಂಧವ್ಯವನ್ನು ಉತ್ತಮಗೊಳಿಸಿಕೊಂಡಿರುವ ಟರ್ಕಿ ಪಾಕಿಸ್ತಾನಿ ಸೈನಿಕರಿಗೆ ಯುದ್ಧ ತರಬೇತಿಯನ್ನು ಮತ್ತು ಡ್ರೋನ್ ಚಲಾಯಿಸುವ ತರಬೇತಿಯನ್ನು ನೀಡಿದೆ ಎಂದು ಹೇಳಲಾಗಿದೆ. ಟರ್ಕಿಯ 3೦೦ಕ್ಕೂ ಅಧಿಕ ಡ್ರೋನ್‌ಗಳನ್ನು ಬಳಕೆ ಮಾಡಿಕೊಂಡು ಪಾಕಿಸ್ತಾನ ಸೇನೆಯು ಭಾರತದ ಉತ್ತರ ಮತ್ತು ಪಶ್ಚಿಮ ಗಡಿಗಳಲ್ಲಿ ಭಾರತೀಯ ಸೇನೆಯ ನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿತ್ತು. ಇನ್ನು ಪಾಕಿಸ್ತಾನ ಸಿಡಿಸಿದ ಡ್ರೋನ್‌ಗಳ ಅವಶೇಷಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಪ್ರಾಥಮಿಕ ವರದಿಯಲ್ಲಿ ಅವು ಟರ್ಕಿಯ ಆಸಿಸ್ಗಾರ್ಡ್ ಸಾಂಗರ್ ಡ್ರೋನ್‌ಗಳಾಗಿವೆ ಎಂದು ಭಾರತೀಯ ಸೇನೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದೆ.

By ಸುಖೇಶ್ ಶಾನಭಾಗ್ Published: Thursday, May 15, 2025, 10:15 [IST]


Scroll to Top