ನಟ ದರ್ಶನ್ ದಂಪತಿಗೆ 22ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮ

By ಸುಖೇಶ್ ಶಾನಭಾಗ್ Published: Tuesday, May 20, 2025, 7:33 [IST]

Actor Challenging Star Darshan Couple Celebrates 22nd Wedding Anniversary

ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ದಂಪತಿ ತಮ್ಮ 22  ನೆಯ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ದರ್ಶನ್ ಅವರು ತಮ್ಮ ಇನ್ಸ್ಟಾಗ್ರಾಮ್ ಸೋಶಿಯಲ್ ಮೀಡಿಯಾದಲ್ಲಿ ಪತಿ ದರ್ಶನ್ ಜೊತೆಗೆ ಇರುವ ಒಂದು ಅದ್ಭುತವಾದ ಸ್ಪೆಷಲ್ ಫೋಟೋವನ್ನು ಹಂಚಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಇರುವ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಆಗಾಗ ತಮ್ಮ ಅಚ್ಚುಮೆಚ್ಚಿನ ಫೋಟೋಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಳ್ಳುತ್ತಾರೆ. ಈ ಫೋಟೋಗೆ ಗಮನ ಸೆಳೆಯುವ ಕ್ಯಾಪ್ಶನ್ ಕೂಡ ನೀಡಿದ್ದಾರೆ. 

ಫೋಟೋಗೆ 'Eternally' ಎಂದು ಕ್ಯಾಪ್ಶನ್ ಕೊಟ್ಟ ವಿಜಯಲಕ್ಷ್ಮಿ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ವಿಜಯಲಕ್ಷ್ಮಿ 2003ರ ಮೇ 19ರಂದು ಧರ್ಮಸ್ಥಳದಲ್ಲಿ ಮಂಜುನಾಥ ಸ್ವಾಮಿಯ ಸಾನಿಧ್ಯದಲ್ಲಿ ಮಾಡುವೆ ಮಾಡಿಕೊಂಡಿದ್ದರು. ಈಗ 22ನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿದ್ದಾರೆ. ಇದೇ ಸವಿ ನೆನಪಿನ ಸಂಭ್ರಮದಲ್ಲಿ ಇನ್ಸ್ಟಾಗ್ರಾಮ್‌ನಲ್ಲಿ ಪತಿ ದರ್ಶನ್ ಜೊತೆಗೆ ಇರುವ ಫೋಟೋ ಹಂಚಿಕೊಂಡಿರುವ ವಿಜಯಲಕ್ಷ್ಮಿ ದರ್ಶನ್ ಆ ಫೋಟೋಗೆ 'Eternally' ಅಂದರೆ 'ಶಾಶ್ವತ ಬಂಧ' ಎಂದು ಕ್ಯಾಚಿ ಆಗಿರುವ ಕ್ಯಾಪ್ಶನ್ ಕೂಡ ನೀಡಿದ್ದಾರೆ. 

ಫೋಟೋ ಹಂಚಿಕೊಂಡು ನಟ ದರ್ಶನ್ ದಂಪತಿಗೆ ಶುಭ ಹಾರೈಸಿದ 'ಡಿ ಕಂಪನಿ' ಅಭಿಮಾನಿ ಬಳಗ 

ನಟ ದರ್ಶನ್ ಅವರ ಅಧಿಕೃತವಾದ ಅಭಿಮಾನಿ ಬಳಗ 'ಡಿ ಕಂಪನಿ' ಕೂಡ ದರ್ಶನ್ ಮತ್ತು ವಿಜಯಲಕ್ಷ್ಮಿ ಅವರ ಫೋಟೋಗಳನ್ನು ಹಂಚಿಕೊಂಡು ಅವರ ವಿವಾಹ ವಾರ್ಷಿಕೋತ್ಸವಕ್ಕೆ ಶುಭ ಹಾರೈಸಿದೆ. 

Actor Challenging Star Darshan Couple Celebrates 22nd Wedding Anniversary

ಕಷ್ಟದ ಸಂದರ್ಭದಲ್ಲಿ ದರ್ಶನ್‌ ಜೊತೆಗೆ ಬೆನ್ನೆಲುಬಾಗಿ ನಿಂತಿದ್ದ ವಿಜಯಲಕ್ಷ್ಮಿ

ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪದ ಮೇಲೆ ನಟ ದರ್ಶನ್ ಜೈಲು ಸೇರಿದ್ದ ಸಂದರ್ಭದಲ್ಲಿ ವಿಜಯಲಕ್ಷ್ಮಿ ದರ್ಶನ್ ಬೆನ್ನಿಗೆ ನಿಂತು ಧೈರ್ಯ ತುಂಬಿದ್ದರು. ನಂತರ ದರ್ಶನ್ ಜಾಮೀನಿನ ಮೇಲೆ ಹೊರಬಂದ ಮೇಲೆ ಯಾವುದೇ ಶೂಟಿಂಗ್ ಅಥವಾ ಕಾರ್ಯಕ್ರಮಕ್ಕೆ ಹೋದರೂ ಸಹ ದರ್ಶನ್ ಜೊತೆಗೆ ಅವರ ತಮ್ಮ ದಿನಕರ್ ತೂಗುದೀಪ್ ಮತ್ತು ಪತ್ನಿ ವಿಜಯಲಕ್ಷ್ಮಿ ಜೊತೆಯಾಗಿ ಇರುತ್ತಾರೆ. ಈ ಜೋಡಿಯನ್ನು ಒಟ್ಟಿಗೆ ನೋಡಲು ಎರಡು ಕಣ್ಣೂ ಸಾಲದು ಎಂದು ನಟ ದರ್ಶನ್ ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ ಎಂದು ವರದಿಯಾಗಿದೆ. 

'ಡೆವಿಲ್' ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾದ ನಟ ದರ್ಶನ್ 

ತಮಗೆ ಬಹಳ ಕಾಲದಿಂದ ಕಾಡುತ್ತಿರುವ ಬೆನ್ನು ನೋವಿನ ಮಧ್ಯದಲ್ಲೂ ಸಹ ನಿರ್ಮಾಪಕರಿಗೆ ತೊಂದರೆ ಆಗಬಾರದು ಎನ್ನುವ ಕಾರಣಕ್ಕೆ ನಟ ದರ್ಶನ್  ತಮ್ಮ ಬಹುನಿರೀಕ್ಷಿತ ʻಡೆವಿಲ್‌ʼ ಸಿನಿಮಾ ಶೂಟಿಂಗ್‌ ಮರಳಿ ಆರಂಭಿಸಿದ್ದಾರೆ. ಜಾಮೀನಿನ ಮೇಲೆ ಹೊರಬಂದಿರುವ ದರ್ಶನ್, 'ಡೆವಿಲ್' ಚಲನಚಿತ್ರಕ್ಕಾಗಿ  ಮತ್ತೆ ಜಿಮ್ ಮಾಡಿ ತಮ್ಮ ದೇಹವನ್ನು ಮೊದಲಿನಂತೆ ಹುರಿಗೊಳಿಸಿ ಆಕರ್ಷಕವಾಗಿ ಕಾಣಿಸುತ್ತಿದ್ದಾರೆ. ಈ ಚಿತ್ರದ ಮೂಲಕ ತಮ್ಮ ಬಹು ದೊಡ್ಡ ಅಭಿಮಾನಿ ವರ್ಗಕ್ಕೆ ಮನೋರಂಜನೆ ನೀಡಲು ಶೂಟಿಂಗಿನಲ್ಲಿ ಬ್ಯುಸಿಯಾಗಿದ್ದಾರೆ. 

ಈ ಚಿತ್ರದ ಶೂಟಿಂಗ್ ಮೈಸೂರು ಹಾಗೂ ರಾಜಸ್ಥಾನದಲ್ಲಿ ಕೆಲವು ದಿನಗಳ ಹಿಂದಷ್ಟೇ ನಡೆದಿದೆ. ರಾಜಸ್ಥಾನದಲ್ಲಿ ನಡೆದ ಚಿತ್ರೀಕರಣದಲ್ಲಿ ದರ್ಶನ್ ಜೊತೆಗೆ ಪತ್ನಿ ವಿಜಯಲಕ್ಷ್ಮಿ ಸಹ ಇದ್ದರು ಎಂದು ವರದಿಯಾಗಿದೆ. 'ಡೆವಿಲ್' ಚಿತ್ರಕ್ಕೆ ಮಿಲನಾ ಪ್ರಕಾಶ್ ಡೈರೆಕ್ಷನ್ ಮಾಡುತ್ತಿದ್ದಾರೆ. ಇದರ ಜೊತೆಗೆ ಮುಖ್ಯ ಪಾತ್ರದಲ್ಲಿ ನಟ ದರ್ಶನ್ ಅಭಿನಯಿಸುತ್ತಿದ್ದಾರೆ. ಜೊತೆಗೆ ರಚನಾ ರೈ, ವಿನಯ್ ಗೌಡ, ಶರ್ಮಿಳಾ ಮಾಂಡ್ರೆ ಸೇರಿದಂತೆ ಬಹು ದೊಡ್ಡ ತಾರಾಗಣ ಈ ಚಿತ್ರದಲ್ಲಿದೆ.

ಕಳೆದ ಒಂದು ವರ್ಷದ ಹಿಂದೆ ತೆರೆಕಂಡು ಬಹು ದೊಡ್ಡ ಯಶಸ್ಸು ಗಳಿಸಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಕಾಟೇರ' ಚಿತ್ರದ ನಂತರ ಅವರ ಬೇರೆ ಯಾವುದೇ ಸಿನಿಮಾಗಳೂ ಸಹ ಬಿಡುಗಡೆಯಾಗಿಲ್ಲ. ಹಾಗಾಗಿ 'ಡೆವಿಲ್' ಚಿತ್ರದ ಮೇಲೆ ದರ್ಶನ್ ಅವರ ಅಭಿಮಾನಿಗಳು ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಈ ಚಿತ್ರ ಇದೇ ವರ್ಷ ಅಕ್ಟೋಬರ್ ಅಥವಾ ವರ್ಷಾಂತ್ಯದಲ್ಲಿ ಬಿಡುಗಡೆಯಾಗುವ ಸಾಧ್ಯತೆ ಹೆಚ್ಚಾಗಿದೆ ಎಂದು ಹೇಳಲಾಗಿದೆ.

ಇದರ ಜೊತೆಗೆ ತಮ್ಮ ಆಪ್ತರಾದ ಡೈರೆಕ್ಟರ್ ಪ್ರೇಮ್ ಮತ್ತು ರಕ್ಷಿತಾ ಪ್ರೇಮ್ ಕುಟುಂಬದ ಮದುವೆಯ ಸಮಾರಂಭದಲ್ಲೂ ಸಹ ನಟ ದರ್ಶನ್ ತಮ್ಮ ಪತ್ನಿ ವಿಜಯಲಕ್ಷ್ಮಿ ಜೊತೆಗೆ ಕಾಣಿಸಿಕೊಂಡಿದ್ದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಮತ್ತು ಫೋಟೋಗಳು ಇಂಟರ್ನೆಟ್ ನಲ್ಲಿ ವೈರಲ್ ಆಗಿವೆ.  ಇವರಿಬ್ಬರ ಜೋಡಿಯ ಮೇಲೆ ಯಾವುದೇ ಕೆಟ್ಟ ಕಣ್ಣು ಬೀಳದೇ, ಇದೇ ರೀತಿ ಖುಷಿಯಾಗಿ ಇರಲಿ ಎಂದು ಅಭಿಮಾನಿಗಳು ಬಯಸುತ್ತಿದ್ದಾರೆ. 

By ಸುಖೇಶ್ ಶಾನಭಾಗ್ Published: Tuesday, May 20, 2025, 7:33 [IST]


Scroll to Top