ಮತ್ತೆ ಹಸಿ ಸುಳ್ಳು ಹೇಳಿದ ಡೊನಾಲ್ಡ್ ಟ್ರಂಪ್! ಇಸ್ರೇಲ್ ಜೊತೆಗಿನ ಕದನ ವಿರಾಮವನ್ನು ನಿರಾಕರಿಸಿದ ಇರಾನ್

By ಸುಖೇಶ್ ಶಾನಭಾಗ್ Published: Wednesday, June 25, 2025, 7:14 [IST]

Iran Refuses Ceasefire with Israel And Calls President Trump Statement False

ಮತ್ತೆ ಜಗತ್ತಿನ ಮುಂದೆ ಬಟಾಬಯಲಾದ ಡೊನಾಲ್ಡ್ ಟ್ರಂಪ್ ಹಸಿ ಸುಳ್ಳು 

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇರಾನ್ ಮತ್ತು ಇಸ್ರೇಲ್ ಮುಂದಿನ 12 ಗಂಟೆಗಳಲ್ಲಿ ಸಂಪೂರ್ಣ ಯುದ್ಧ ವಿರಾಮಕ್ಕೆ ಒಪ್ಪಿಗೆ ನೀಡಿವೆ ಎಂದು ಸಾರ್ವಜನಿಕವಾಗಿ ಘೋಷಿಸಿದ ನಂತರ, ಇರಾನ್ ತ್ವರಿತವಾಗಿ ಈ ಹೇಳಿಕೆಯನ್ನು ತಳ್ಳಿಹಾಕಿದ್ದು, ಯಾವುದೇ ಅಧಿಕೃತ ಒಪ್ಪಂದವಾಗಿಲ್ಲವೆಂದು ಸ್ಪಷ್ಟಪಡಿಸಿದೆ. 

ಇದರಿಂದಾಗಿ ಡೊನಾಲ್ಡ್ ಟ್ರಂಪ್ ಮತ್ತೆ ಸುಳ್ಳು ಹೇಳಿದ್ದು ಸಾಭೀತಾದಂತೆ ಆಗಿದೆ. ಇದಕ್ಕೂ ಮೊದಲು ಭಾರತ-ಪಾಕಿಸ್ತಾನದ ನಡುವಿನ ಯುದ್ಧ ವಿರಾಮವನ್ನೂ ಸಹ ತಾವೇ ಮಾಡಿಸಿದ್ದಾಗಿ ಡೊನಾಲ್ಡ್ ಟ್ರಂಪ್ ಸುಳ್ಳು ಹೇಳಿ, ಬಡಾಯಿ ಕೊಚ್ಚಿಕೊಂಡಿದ್ದರು. 

ಆದರೆ ಭಾರತ ಮತ್ತು ಪಾಕಿಸ್ತಾನ ಪರಸ್ಪರ ಡಿಜಿಎಂಓ ಲೆವೆಲ್ ನಲ್ಲಿ ಮಾತುಕತೆ ನಡೆಸಿ ಕದನ ವಿರಾಮವನ್ನು ಒಪ್ಪಿಕೊಂಡಿದ್ದವು. ಇದರಲ್ಲಿ ಡೊನಾಲ್ಡ್ ಟ್ರಂಪ್ ಪಾಲು ಎಳ್ಳಷ್ಟೂ ಇರಲಿಲ್ಲ. 

ಇದರ ಜೊತೆಗೆ ಕದನ ವಿರಾಮವನ್ನು ಇರಾನ್ ತಿರಸ್ಕರಿಸಿರುವುದರಿಂದ, ಜಗತ್ತಿನ ಯಾವುದೇ ಮೂಲೆಯಲ್ಲಿ ಯುದ್ಧ ನಡೆದರೂ ಅದು ನಿಲ್ಲಿಸಿದ ಶ್ರೇಯ ತನಗೇ  ಸಲ್ಲಬೇಕು ಎನ್ನುವ ಹಪಾ-ಹಪಿಯಲ್ಲಿ ಟ್ರಂಪ್ ಹೇಳಿದ ಹಸಿ ಸುಳ್ಳುಗಳು ಪದೇ-ಪದೇ ಜಗತ್ತಿನ ಮುಂದೆ ಸಾಭೀತಾದಂತೆ ಆಗಿದೆ.

ಇರಾನ್‌ನ ಅಧಿಕೃತ ಪ್ರತಿಕ್ರಿಯೆ

ಇರಾನ್‌ ವಿದೇಶಾಂಗ ಸಚಿವ ಅಬ್ಬಾಸ್ ಅರಾಘಚಿ, ಸಾಮಾಜಿಕ ಮಾಧ್ಯಮ ವೇದಿಕೆ X (ಹಳೆಯ ಟ್ವಿಟ್ಟರ್) ನಲ್ಲಿ ಬರೆದಿದ್ದಾರೆ:

“ಈ ಯುದ್ಧವನ್ನು ಆರಂಭಿಸಿದವರು ನಾವಲ್ಲ; ಇಸ್ರೇಲ್ ಇದನ್ನು ಆರಂಭಿಸಿದೆ. ಯಾವುದೇ ಯುದ್ಧ ವಿರಾಮ ಅಥವಾ ಸೈನಿಕ ಚಟುವಟಿಕೆ ನಿಲ್ಲಿಸುವ ಒಪ್ಪಂದವಾಗಿಲ್ಲ. ಇಸ್ರೇಲ್ ತನ್ನ ಬಂಡಾಯದ ದಾಳಿಗಳನ್ನು ನಿಲ್ಲಿಸಿದರೆ, ನಾವು ಯುದ್ಧ ಮುಂದುವರಿಸಲು ಕಾರಣ ಇರುವುದಿಲ್ಲ. ಇಸ್ರೇಲ್ ನ ಮುಂದಿನ ನಡೆಯನ್ನು ನೋಡಿ, ನಮ್ಮ ಪ್ರತಿಸ್ಪಂದನವನ್ನು ತಾತ್ಕಾಲಿಕವಾಗಿ ನಿಲ್ಲಿಸಲು ತೆಗೆದುಕೊಳ್ಳಬೇಕಾದ ಅಂತಿಮ ನಿರ್ಧಾರವನ್ನು ನಂತರ ತೆಗೆದುಕೊಳ್ಳಲಾಗುವುದು.” ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಈ ಹೇಳಿಕೆಯಿಂದ, ಯುದ್ಧ ವಿರಾಮದ ಮಾತುಕತೆಗಳೇ ನಡೆಯುತ್ತಿಲ್ಲವೆಂಬುದು ಸ್ಪಷ್ಟವಾದಂತೆ ಆಗಿದೆ. ಇಸ್ರೇಲ್ ತನ್ನ ವೈಮಾನಿಕ ದಾಳಿಗಳನ್ನು ಬೆಳಿಗ್ಗೆ 4:00 ಗಂಟೆಗೆ (ಟೆಹರಾನ್ ಸಮಯ) ನಿಲ್ಲಿಸಿದರೆ ಮಾತ್ರ, ಇರಾನ್ ತನ್ನ ಸೈನಿಕ ಚಟುವಟಿಕೆಗಳನ್ನು ನಿಲ್ಲಿಸುವ ಸಾಧ್ಯತೆಯ ಬಗ್ಗೆ ಚಿಂತನೆ ಮಾಡಬಹುದು ಎಂದು ಅರಾಘಚಿ ಹೇಳಿದರು.

ಇನ್ನೂ ಯಾವುದೇ ಅಂತಿಮ ಒಪ್ಪಂದ ಆಗಿಲ್ಲ

ಟ್ರಂಪ್ ಘೋಷಣೆಗೂ ಕೆಲವೇ ಗಂಟೆಗಳ ಮೊದಲು, ಇರಾನ್ ಇರಾಕ್ ಮತ್ತು ಕತಾರ್‌ನಲ್ಲಿನ ಅಮೆರಿಕದ ಸೇನೆಗಳ ಮೇಲೆ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಉದ್ವಿಗ್ನತೆ ಗರಿಷ್ಠ ಮಟ್ಟ ತಲುಪಿತ್ತು. ಇದರ ಬೆನ್ನಲ್ಲೇ ಅಮೆರಿಕ, ಯುದ್ಧ ವಿರಾಮದ ಒಪ್ಪಂದವಾಯಿತು ಎಂದು ತುರಾ-ತುರಿಯಲ್ಲಿ ಘೋಷಿಸಿತು.

ವರದಿಗಳ ಪ್ರಕಾರ, ಇಸ್ರೇಲ್ ಯುದ್ಧ ವಿರಾಮದ ಷರತ್ತುಗಳನ್ನು ಒಪ್ಪಿಕೊಂಡಿದ್ದರೂ, ಇರಾನ್ ಒಪ್ಪಿಕೊಂಡಿಲ್ಲ. ಇದರಿಂದಾಗಿ ಅಮೆರಿಕ ಕತಾರ್ ಪ್ರಧಾನಿ ಶೇಖ್ ಮೊಹಮ್ಮದ್ ಬಿನ್ ಅಬ್ದುಲ್ ರಹ್ಮಾನ್ ಅಲ್ ಥಾನಿ ಅವರೊಂದಿಗೆ ಸಂಪರ್ಕ ಸಾಧಿಸಿ, ಇರಾನ್‌ನೊಂದಿಗೆ ಮಧ್ಯವರ್ತಿ ಭೂಮಿಕೆ ನಿರ್ವಹಿಸುವಂತೆ ವಿನಂತಿಸಿದೆ.

ಆದರೂ, ಟೆಹರಾನ್ ಮತ್ತು ಅದರ ಸುತ್ತಲೂ ಇಸ್ರೇಲ್‌ನ ಸೈನಿಕ ಚಟುವಟಿಕೆಗಳು ಮುಂದುವರಿದಿರುವುದಾಗಿ ವರದಿಯಾಗಿದೆ. ಈವರೆಗೆ ಯಾವುದೇ ದೃಢವಾದ ಅಥವಾ ಖಚಿತಪಡಿಸಲಾದ ವಿರಾಮ ಒಪ್ಪಂದ ಆಗಿಲ್ಲ. ರಾಜತಾಂತ್ರಿಕ ಮಾತುಕತೆಗಳು ಮುಂದುವರಿದಿದ್ದು, ಜಾಗತಿಕ ಸಮುದಾಯ ಯುದ್ಧ ವಿರಾಮಕ್ಕಾಗಿ ಒತ್ತಡ ಹಾಕುತ್ತಿದೆ.

ಕದನ ವಿರಾಮದ ಕುರಿತು ತುರಾ-ತುರಿಯ ಸುಳ್ಳು ಘೋಷಣೆ ಮಾಡಿದ ಟ್ರಂಪ್

ಮಂಗಳವಾರ ಬೆಳಗ್ಗೆ, ಟ್ರಂಪ್ ತಮ್ಮ ಟ್ರುಥ್ ಸೋಶಿಯಲ್ ಪ್ಲಾಟ್‌ಫಾರ್ಮ್‌ನಲ್ಲಿ ಈ ವಿಷಯ ಕುರಿತು ಹಂಚಿಕೊಂಡಿದ್ದರು:

“ಇಸ್ರೇಲ್ ಮತ್ತು ಇರಾನ್ ಸಂಪೂರ್ಣ ಯುದ್ಧ ವಿರಾಮಕ್ಕೆ ಒಪ್ಪಿಕೊಂಡಿವೆ. ಎಲ್ಲರಿಗೂ ಅಭಿನಂದನೆಗಳು! ಸುಮಾರು 6 ಗಂಟೆಗಳೊಳಗೆ-ಪ್ರಸ್ತುತ ನಡೆಯುತ್ತಿರುವ ಸೈನಿಕ ಕಾರ್ಯಾಚರಣೆಗಳು ಪೂರ್ಣಗೊಂಡ ಬಳಿಕ-ಈ ಯುದ್ಧ ಅಧಿಕೃತವಾಗಿ ಅಂತ್ಯವಾಗಲಿದೆ. ಇರಾನ್‌ನ ವಿರಾಮ 12ನೇ ಗಂಟೆಯಲ್ಲಿ ಪ್ರಾರಂಭವಾಗಲಿದೆ, ಇಸ್ರೇಲ್‌ನ ಕಡೆಯಿಂದ ಕದನ ವಿರಾಮ 24ನೇ ಗಂಟೆಯಲ್ಲಿ ಆರಂಭವಾಗಲಿದೆ. ಈ 12 ದಿನಗಳ ಯುದ್ಧ ಮಧ್ಯಪೂರ್ವದಲ್ಲಿ ದೊಡ್ಡ ತಾಳ್ಮೆ ಕಳೆಯುವ ಸ್ಥಿತಿಗೆ ಹೋಗಬಹುದಾಗಿತ್ತು, ಆದರೆ ಹಾಗಾಗುವುದಿಲ್ಲ. ಇದು ಮುಕ್ತಾಯವಾಗಿದೆ!”

ಇರಾನ್ ಮತ್ತು ಇಸ್ರೇಲ್ ಶಾಂತಿಯ ಭಿಕ್ಷೆ ಬೇಡಿದವು: ಟ್ರಂಪ್

ಟ್ರಂಪ್ ಮುಂದುವರೆದು, ಈ ಎರಡು ರಾಷ್ಟ್ರಗಳು ಅವರ ಬಳಿ ಶಾಂತಿ ಅನ್ವೇಷಣೆಗಾಗಿ ಬಂದಿದ್ದವು ಎಂದು ಹೇಳಿದರು.

“ಇಸ್ರೇಲ್ ಮತ್ತು ಇರಾನ್ ಏಕಕಾಲದಲ್ಲಿ ನನ್ನ ಬಳಿ ಬಂದು ಶಾಂತಿ ಕೋರಿ ಬಂದಿದ್ದವು. ನನಗೆ ಸಮಯ ಸರಿಯಿದೆ ಎಂಬ ಭರವಸೆ ಇತ್ತು. ನಿಜವಾದ ವಿಜೇತರು ಮಧ್ಯಪ್ರಾಚ್ಯದ ಜನತೆ ಮತ್ತು ಜಗತ್ತಿನ ಜನರು. ಇನ್ನು ಮುಂದೆ ಇವೆರಡೂ ರಾಷ್ಟ್ರಗಳು ಶಾಂತಿ, ಅಭಿವೃದ್ಧಿ ಮತ್ತು ಆಶಯಗಳತ್ತ ನೋಡುವ ಗುರಿಯನ್ನು ಹೊಂದಿವೆ. ಅವರು ನಂಬಿಕೆ ಅಥವಾ ಶಾಂತಿಯ ಮಾರ್ಗದಿಂದ ದಾರಿ ತಪ್ಪಿದರೆ, ಎಲ್ಲವನ್ನೂ ಕಳೆದುಕೊಳ್ಳುತ್ತಾರೆ. ಭವಿಷ್ಯವು ಇವರಿಗೆ ಪ್ರಕಾಶಮಾನವಾಗಿದೆ. ದೇವರು ಎಲ್ಲರ ಮೇಲೂ ಕರುಣೆ ವಹಿಸಲಿ!” ಎಂದು ಟ್ರಂಪ್ ಹೇಳಿದರು.

ಸಂಬಂಧಿತ ಕೊಂಡಿಗಳು: ಇತ್ತೀಚಿನ ಸುದ್ದಿಗಳು, ಅಂತರರಾಷ್ಟ್ರೀಯ ಸುದ್ದಿಗಳು

Hash Tags: #LatestNews #InternationalNews

By ಸುಖೇಶ್ ಶಾನಭಾಗ್ Published: Wednesday, June 25, 2025, 7:14 [IST]


Scroll to Top