ಇಸ್ರೇಲ್-ಇರಾನ್ ಯುದ್ಧಕ್ಕೆ ಅಂತ್ಯ: ಕದನ ವಿರಾಮ ಘೋಷಣೆ ಮಾಡಿದ ಟ್ರಂಪ್!

By ಸುಖೇಶ್ ಶಾನಭಾಗ್ Published: Tuesday, June 24, 2025, 9:37 [IST]

Trump Announces Ceasefire Agreement Between Israel and Iran

ವಾಷಿಂಗ್ಟನ್ ಡಿಸಿ: ಇಸ್ರೇಲ್ ಮತ್ತು ಇರಾನ್ ನಡುವೆ 12 ದಿನಗಳ ಕಾಲ ನಡೆದ ಯುದ್ಧ ಅಂತ್ಯಗೊಳ್ಳಲಿದ್ದು, ಅಮೇರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಂಪೂರ್ಣ ಯುದ್ಧ ವಿರಾಮ ಒಪ್ಪಂದವನ್ನು ಘೋಷಿಸಿದ್ದಾರೆ.

ಈ ಘೋಷಣೆಯನ್ನು ಟ್ರಂಪ್ ಅವರ ಸಾಮಾಜಿಕ ಜಾಲತಾಣ ಟ್ರೂತ್ ಸೋಶಿಯಲ್ ನಲ್ಲಿ ಹಂಚಿಕೊಂಡಿದ್ದು, ಅವರು ಈ ರೀತಿ ಬರೆದಿದ್ದಾರೆ: "ಎಲ್ಲರಿಗೂ ಅಭಿನಂದನೆಗಳು! ಇಸ್ರೇಲ್ ಮತ್ತು ಇರಾನ್ ಸಂಪೂರ್ಣ ಯುದ್ಧ ವಿರಾಮಕ್ಕೆ ಒಪ್ಪಿಗೆ ನೀಡಿವೆ. ಎರಡೂ ದೇಶಗಳು ತಮ್ಮ ಅಂತಿಮ ಕಾರ್ಯಾಚರಣೆಗಳನ್ನು ಪೂರ್ಣಗೊಳಿಸಿದ ನಂತರ, ಸುಮಾರು 6 ಗಂಟೆಗಳ ಒಳಗೆ ಯುದ್ಧ ವಿರಾಮ ಪ್ರಾರಂಭವಾಗುತ್ತದೆ ಮತ್ತು ಅದು 12 ಗಂಟೆಗಳ ಕಾಲ ಮುಂದುವರಿಯುತ್ತದೆ. ಅದರ ನಂತರ ಯುದ್ಧ ಅಧಿಕೃತವಾಗಿ ಕೊನೆಗೊಳ್ಳಲಿದೆ."

ಟ್ರಂಪ್ ಅವರ ಪ್ರಕಾರ, ಇರಾನ್ ಮೊದಲು ಯುದ್ಧ ನಿಲ್ಲಿಸಲು ಮುಂದಾಗುತ್ತದೆ ಮತ್ತು 12 ಗಂಟೆಗಳ ನಂತರ ಇಸ್ರೇಲ್ ಕೂಡ ಇದನ್ನು ಅನುಸರಿಸುತ್ತದೆ. 24 ಗಂಟೆಗಳ ಒಳಗೆ ಯುದ್ಧ ಅಧಿಕೃತವಾಗಿ ಮುಕ್ತಾಯವಾಗುವ ನಿರೀಕ್ಷೆಯಿದೆ. ಯುದ್ಧ ವಿರಾಮ ಅವಧಿಯಲ್ಲಿ ಶಾಂತಿ ಮತ್ತು ಪರಸ್ಪರ ಗೌರವವನ್ನು ಉಳಿಸಿಕೊಳ್ಳಲು ಎರಡೂ ದೇಶಗಳು ಒಪ್ಪಿಗೆ ಸೂಚಿಸಿವೆ.

"ಯಾವುದೇ ಅಡಚಣೆ ಇಲ್ಲದೆ ಈ ಒಪ್ಪಂದ ನೆರವೇರಿದೆ. ಇಸ್ರೇಲ್ ಮತ್ತು ಇರಾನ್ ಎರಡೂ ದೇಶಗಳು ಶೌರ್ಯ ಮತ್ತು ವಿವೇಕ ತೋರಿಸಿದ್ದು, ಯುದ್ಧವನ್ನು ಕೊನೆಗೊಳಿಸಿವೆ. ಈ ಯುದ್ಧ ವರ್ಷಗಳ ಕಾಲ ಮುಂದುವರಿದಿದ್ದರೆ, ಸಂಪೂರ್ಣವಾಗಿ ಮಧ್ಯಪ್ರಾಚ್ಯವನ್ನು ನಾಶ ಮಾಡುತ್ತಿತ್ತು. ಆದರೆ ಅದು ನಡೆಯಲಿಲ್ಲ - ಮತ್ತು ಮುಂದೆಯೂ ನಡೆಯುವುದಿಲ್ಲ!" ಎಂದು ಅಮೇರಿಕಾದ  ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಅವರು ತಮ್ಮ ಸಂದೇಶವನ್ನು ಎಲ್ಲಾ ರಾಷ್ಟ್ರಗಳಿಗೆ ಹಾಗೂ ಜಗತ್ತಿಗೆ ಶುಭಕೋರುವ ಮೂಲಕ ಕೊನೆಗೊಳಿಸಿದರು.

ಇಸ್ರೇಲ್ ಅಥವಾ ಇರಾನಿನಿಂದ ಯಾವುದೇ ಅಧಿಕೃತ ಪ್ರತಿಕ್ರಿಯೆ ಇಲ್ಲ

ಈವರೆಗೆ ಇಸ್ರೇಲ್ ಅಥವಾ ಇರಾನ್ ಯಾವುದೇ ಅಧಿಕೃತ ಘೋಷಣೆ ನೀಡಿಲ್ಲ. ಟ್ರಂಪ್ ಇಂತಹ ಘೋಷಣೆಗಳನ್ನು ಹಿಂದೆಯೂ ಸಹ ಮಾಡಿದ್ದು, ಭಾರತ-ಪಾಕಿಸ್ತಾನ ಸಂಘರ್ಷದ ಸಂದರ್ಭದಲ್ಲಿ ಕೂಡ ಅವರು ತಾವೇ ಕದನ ವಿರಾಮ ಮಾಡಿಸಿದ್ದಾಗಿ ತುರಾತುರಿಯಲ್ಲಿ ಆಘಾತಕಾರಿ ಘೋಷಣೆ ಮಾಡಿದ್ದರು. ನಂತರ, ಭಾರತ-ಪಾಕಿಸ್ತಾನ ಸಂಘರ್ಷದಲ್ಲಿ ಯುದ್ಧ ವಿರಾಮ ಎರಡೂ ದೇಶಗಳ ಮಾತುಕತೆಯಿಂದ ನಿರ್ಧಾರವಾಗಿದ್ದು, ಹಾಗೂ ಡೊನಾಲ್ಡ್ ಟ್ರಂಪ್ ತಮ್ಮಿಂದಲೇ ಕದನ ವಿರಾಮ ಆಯಿತು ಎಂದು ಹೇಳಿದ ಮಾತುಗಳು ಸುಳ್ಳು ಎಂದು ಸಾಭೀತಾಯಿತು.

ಯುದ್ಧ ವಿರಾಮದ ಕೆಲ ಗಂಟೆಗಳ ಮೊದಲು ತೆಹ್ರಾನ್‌ನಲ್ಲಿ ಸ್ಫೋಟಗಳು

ಯುದ್ಧ ವಿರಾಮದ ಘೋಷಣೆಗೆ ಕೆಲವೇ ಗಂಟೆಗಳ ಮೊದಲು ಇರಾನ್ ರಾಜಧಾನಿ ತೆಹ್ರಾನ್‌ನಲ್ಲಿ ಭಾರೀ ಸ್ಫೋಟಗಳು ಸಂಭವಿಸಿದವು. ಮಧ್ಯರಾತ್ರಿ 3:00 (ತೆಹ್ರಾನ್ ಸಮಯ) ಸುಮಾರಿಗೆ ನಗರದ ಉತ್ತರ ಮತ್ತು ಮಧ್ಯ ಭಾಗಗಳಲ್ಲಿ ಭಾರೀ ಸಿಡಿತಗಳು ಸಂಭವಿಸಿದವು ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಈ ಸಂದರ್ಭದಲ್ಲಿ ಯುದ್ಧ ವಿಮಾನಗಳು ಕೂಡ ಆಕಾಶದಲ್ಲಿ ಗೋಚರಿಸಿದವು.

ಟ್ರಂಪ್ ನೀಡಿದ ವೇಳಾಪಟ್ಟಿಯ ಪ್ರಕಾರ, ಇರಾನ್ 04:00 GMTಕ್ಕೆ ಸೈನಿಕ ಚಟುವಟಿಕೆ ನಿಲ್ಲಿಸಬೇಕಿತ್ತು. ಆದ್ದರಿಂದ ಈ ಸ್ಫೋಟಗಳು ಯುದ್ಧ ವಿರಾಮದ ತಕ್ಷಣದ ಅನುಷ್ಠಾನದ ಕುರಿತು ಅನುಮಾನ ಉಂಟುಮಾಡಿವೆ.

ಅಮೆರಿಕದ ಗುರಿಯಾಗಿದ್ದ ಇರಾನಿನ ಪರಮಾಣು ಸೈಟ್‌ಗಳಿಗೆ ದಾಳಿ ಬಳಿಕ ಇರಾನಿನ ಪ್ರತಿಕ್ರಿಯೆ

ಈ ಯುದ್ಧ ವಿರಾಮದ ಘೋಷಣೆಗೆ ಮೊದಲು, ಅಮೆರಿಕ ಮತ್ತು ಇರಾನ್ ನಡುವೆ ಉದ್ವಿಗ್ನತೆ ಹೆಚ್ಚಾಗಿತ್ತು. ಅಮೆರಿಕ ತನ್ನ ವೈಮಾನಿಕ ದಾಳಿಗಳ ಮೂಲಕ ಇರಾನಿನ ಮೂರು ಪರಮಾಣು ಸ್ಥಾವರಗಳನ್ನು ಗುರಿಯಾಗಿಸಿ ದಾಳಿ ಮಾಡಿತ್ತು.

ಇದಕ್ಕೆ ಪ್ರತಿಯಾಗಿ ಮತ್ತು ರಷ್ಯಾದಿಂದ ಅಸ್ತ್ರ ಸಹಾಯದ ಭರವಸೆ ಪಡೆದಿರುವ ಬೆನ್ನಲ್ಲೇ ಇರಾನ್, ಕತಾರ್ ಹಾಗೂ ಇರಾಕ್‌ನ ಅಮೆರಿಕದ ವಾಯುನೆಲೆಗಳನ್ನು ಗುರಿಯಾಗಿಸಿ ದೂರ ಹಾರುವ ಕ್ಷಿಪಣಿಗಳನ್ನು ಉಡಾಯಿಸಿ ದಾಳಿ ನಡೆಸಿತ್ತು. ಈ ಘಟನೆ ಹಿನ್ನೆಲೆಯಲ್ಲಿ, ದೋಹಾದಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಭಾರತೀಯರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಗೊಳ್ಳುವಂತೆ ಎಚ್ಚರಿಕೆ ನೀಡಿತು.

ಅಮೆರಿಕದ ಗುಪ್ತಚರ ಸಂಸ್ಥೆಗಳು ಈಗಾಗಲೇ “ಆಪರೇಷನ್ ಮಿಡ್ನೈಟ್ ಹ್ಯಾಮರ್” ಗೆ ಪ್ರತಿಯಾಗಿ ಇರಾನ್, 48 ಗಂಟೆಗಳ ಒಳಗೆ ಅಮೆರಿಕದ ಸೈನಿಕ ಸೌಲಭ್ಯಗಳನ್ನು ಗುರಿಯಾಗಿಸಲು ಸಿದ್ಧತೆ ನಡೆಸುತ್ತಿದೆ ಎಂದು ಎಚ್ಚರಿಕೆ ನೀಡಿದ್ದವು. ಇರಾಕ್, ಸಿರಿಯಾ, ಕುವೈತ್, ಸೌದಿ ಅರೇಬಿಯಾ, ಬಹರೈನ್ ಮತ್ತು ಕತಾರ್‌ನಲ್ಲಿ ಅಮೆರಿಕದ ನೆಲೆಗಳ ಮೇಲೆ ದಾಳಿ ನಡೆಯಬಹುದೆಂಬ ಆತಂಕವಿತ್ತು.

ಇರಾನಿನ ತಂತ್ರಜ್ಞಾನಿಕ ಗುರಿಗಳನ್ನು ಗುರಿಯಾಗಿಸಿ ದಾಳಿ ನಡೆಸಿದ ಇಸ್ರೇಲ್

ಇದೀಗ, ಇಸ್ರೇಲ್ ತನ್ನ ಸೈನಿಕ ಕಾರ್ಯಾಚರಣೆಯನ್ನು ಮುಂದುವರೆಸಿದ್ದು, ಸೋಮವಾರ ಹಲವಾರು ತಂತ್ರಜ್ಞಾನ ಸೈಟುಗಳ ಮೇಲೆ ಬಾಂಬ್ ದಾಳಿ ನಡೆಸಿದೆ. ಇದರಲ್ಲಿ ಪರಮಾಣು ಸ್ಥಾವರಗಳು, ಸೈನ್ಯದ ಶಿಬಿರಗಳು ಸೇರಿದಂತೆ ಅನೇಕ ಮುಖ್ಯವಾದ ಸ್ಥಳಗಳು ಸೇರಿವೆ. 

ಇಸ್ರೇಲ್ ರಕ್ಷಣಾ ಪಡೆ (IDF) ಹೇಳಿಕೆ ನೀಡಿದೆ: 

"ಇರಾನಿನ ಪರಮಾಣು ಸೈಟುಗಳು, ಸೈನಿಕ ನೆಲೆಗಳು, ಹಾಗೂ ತಂತ್ರಜ್ಞಾನ ಸೌಲಭ್ಯಗಳನ್ನು ಗುರಿಯಾಗಿಸಲಾಗಿದೆ. ಈ ದಾಳಿಗಳು ಇರಾನ್ ನಿಂದ ಇಸ್ರೇಲ್ ನಾಗರಿಕರ ಮೇಲೆ ನಡೆದ ದಾಳಿಗಳಿಗೆ ಪ್ರತಿಕ್ರಿಯೆಯಾಗಿದೆ. ಇವುಗಳ ಮೂಲಕ ಅಲಿ ಖಮೇನಿಗೆ ಎಚ್ಚರಿಕೆ ನೀಡಲಾಗಿದೆ."

ಅಮೆರಿಕದ ಗುರಿಯಾಗಿದ್ದ ಫೋರ್ಡೋ ಪರಮಾಣು ಸೈಟ್ ಅನ್ನು ಇಸ್ರೇಲ್ ಮತ್ತೆ ಗುರಿಯಾಗಿಸಿದ್ದು, ಈ ದಾಳಿಗೆ ಪ್ರತಿಯಾಗಿ ಇರಾನ್ ಕೂಡ ತೆಹ್ರಾನ್ ಬಳಿ ಇಸ್ರೇಲ್ ನೆಲೆಗಳನ್ನು ಗುರಿಯಾಗಿಸಿ, ಇಸ್ರೇಲ್‌ನ 6 ವಿಮಾನ ನಿಲ್ದಾಣಗಳ ಮೇಲೆ ದಾಳಿ ನಡೆಸಿತು.

ಸಾಮರಸ್ಯದ ಘೋಷಣೆಯ ನಡುವೆ ಸಂಭ್ರಮ ಮತ್ತು ಆತಂಕ

ಈ ಭೀಕರ ದಾಳಿ ನಡೆದ ಕೇವಲ ಒಂದು ದಿನದ ನಂತರ, ಅಧ್ಯಕ್ಷ ಟ್ರಂಪ್ ಯುದ್ಧ ವಿರಾಮ ಘೋಷಣೆ ಮಾಡಿದರು. ಜಗತ್ತಿನಾದ್ಯಂತ ಈ ಘೋಷಣೆಗೆ ಹರ್ಷ ವ್ಯಕ್ತವಾಗಿದೆ. ಆದರೆ ಇನ್ನೂ ಇಸ್ರೇಲ್ ಅಥವಾ ಇರಾನ್ ಇವುಗಳಿಂದ ಅಧಿಕೃತ ದೃಢೀಕರಣ ಬಂದಿಲ್ಲ ಮತ್ತು ಸೈನಿಕ ಚಟುವಟಿಕೆ ಮುಂದುವರೆದಿರುವುದರಿಂದ ಪರಿಸ್ಥಿತಿ ಇನ್ನೂ ಅಸ್ಥಿರವಾಗಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಸಂಬಂಧಿತ ಕೊಂಡಿಗಳು: ಇತ್ತೀಚಿನ ಸುದ್ದಿಗಳು, ಅಂತರರಾಷ್ಟ್ರೀಯ ಸುದ್ದಿಗಳು

Hash Tags: #LatestNews #InternationalNews

By ಸುಖೇಶ್ ಶಾನಭಾಗ್ Published: Tuesday, June 24, 2025, 9:37 [IST]


Scroll to Top