ಭಾರತ-ಪಾಕಿಸ್ತಾನ ಯುದ್ಧವನ್ನು ತಾನೇ ನಿಲ್ಲಿಸಿದ್ದಾಗಿ ಮತ್ತೆ ಹೇಳಿಕೆ ನೀಡಿದ ಟ್ರಂಪ್! ಮೂರನೇ ವ್ಯಕ್ತಿಯ ಪಾತ್ರವನ್ನು ನಿರಾಕರಿಸಿದ ಭಾರತ

By ಸುಖೇಶ್ ಶಾನಭಾಗ್ Published: Thursday, June 19, 2025, 8:44 [IST]

Trump Repeats Claim of Stopping India Pakistan War

ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ ಇತ್ತೀಚೆಗೆ ಯುದ್ಧದ ಅಂಚಿಗೆ ತಲುಪಿದ್ದು, ಜಾಗತಿಕ ಗಮನ ಸೆಳೆದ ವಿಷಯ ನಿಮಗೆ ಗೊತ್ತೇ ಇರಬಹುದು. ಈ ಜಾಗತಿಕ ಸಂಕಟದ ಹಂತದಲ್ಲಿ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಈ ಎರಡು ಅಣ್ವಸ್ತ್ರ ಶಕ್ತಿಗಳ ನಡುವೆ ಸಂಪೂರ್ಣ ಯುದ್ಧವನ್ನು ತಡೆಗಟ್ಟುವಲ್ಲಿ ತಮ್ಮ ಪಾತ್ರ ನಿರ್ಣಾಯಕವಾಗಿತ್ತು ಎಂದು ಹೇಳಿಕೆ ನೀಡಿದ್ದರು. ಈಗ ಮತ್ತೆ ಟ್ರಂಪ್ ತಮ್ಮದೇ ಕಾರಣದಿಂದ ಯುದ್ಧ ನಿಂತಿತು ಎಂದು ಪುನಃ ಹೇಳಿಕೆ ನೀಡಿ ನಗೆಪಾಟಲಿಗೆ ಈಡಾಗಿದ್ದಾರೆ.

ವೈಟ್ ಹೌಸ್‌ನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಟ್ರಂಪ್ ಹೇಳಿದರು, “ನಾನು ಪಾಕಿಸ್ತಾನ ಮತ್ತು ಭಾರತದ ನಡುವಿನ ಯುದ್ಧವನ್ನು ನಿಲ್ಲಿಸಿದ್ದೆ. ನನಗೆ ಪಾಕಿಸ್ತಾನ ತುಂಬಾ ಇಷ್ಟವಾಗಿದೆ. ಮೋದಿ ಒಬ್ಬ ಅದ್ಭುತ ವ್ಯಕ್ತಿ; ನಿನ್ನೆ ರಾತ್ರಿ ನಾನು ಅವರೊಂದಿಗೆ ಮಾತನಾಡಿದೆ.” 

ಅವರು ಭಾರತೀಯ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಹಾಗೂ ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಆಸಿಮ್ ಮುನೀರ್ ಅವರನ್ನು ಯುದ್ಧದ ಕಡೆಗೆ ಹೋಗುತ್ತಿದ್ದ ಪರಿಸ್ಥಿತಿಯನ್ನು ನಿಯಂತ್ರಿಸಲು ಪ್ರದರ್ಶಿಸಿದ ಪಾತ್ರಕ್ಕಾಗಿ ಮೆಚ್ಚುಗೆ ಸೂಚಿಸಿದರು.

ಟ್ರಂಪ್ ಮತ್ತೊಂದು ಮಹತ್ವದ ವಿಷಯವನ್ನೂ ಸಹ ಹೇಳಿದರು: “ಇದು ಎರಡು ಅಣ್ವಸ್ತ್ರ ಶಕ್ತಿಗಳ ನಡುವಿನ ಯುದ್ಧದ ಕಠಿಣ ಕ್ಷಣವಾಗಿತ್ತು. ನಾನು ಅದನ್ನು ನಿಲ್ಲಿಸಿದೆ, ಆದರೆ ಯಾರೂ ಇದನ್ನು ಹೇಳುವುದಿಲ್ಲ ಮತ್ತು ಇದರ ಬಗ್ಗೆ ಬರೆಯುವುದಿಲ್ಲ”.

ಅವರು ಮುಂಬರುವ ವ್ಯಾಪಾರ ಚರ್ಚೆಗಳ ಬಗ್ಗೆ ಸೂಚನೆ ನೀಡುತ್ತಾ ಹೇಳಿದರು, “ನಾವು ಭಾರತದ ಪ್ರಧಾನಿ ನರೇಂದ್ರ ಮೋದಿ ಜೊತೆ ಒಂದು ವ್ಯಾಪಾರ ಒಪ್ಪಂದ ಮಾಡಲಿದ್ದೇವೆ.”

ಆದಾಗ್ಯೂ, ಪ್ರಧಾನಿ ನರೇಂದ್ರ ಮೋದಿ ಅವರು ಭಾರತ-ಪಾಕಿಸ್ತಾನ ಸಂಬಂಧಗಳಲ್ಲಿ ತೃತೀಯ ಪಕ್ಷದ ಅಥವಾ ವ್ಯಕ್ತಿಯ ಮಧ್ಯಸ್ಥಿಕೆಗೆ ಯಾವತ್ತೂ ಅವಕಾಶವಿಲ್ಲ ಮತ್ತು ಅವಕಾಶ ನೀಡಿಲ್ಲ ಎಂದು ಸ್ಪಷ್ಟವಾಗಿ ಹೇಳಿಕೊಂಡಿದ್ದಾರೆ. ಅಧಿಕೃತ ಹೇಳಿಕೆಗಳ ಪ್ರಕಾರ, ಭಾರತ ಇಂತಹ ವಿಷಯಗಳನ್ನು ಎರಡು ದೇಶಗಳ ನಡುವಿನ ದ್ವಿಪಕ್ಷೀಯ ಮಟ್ಟದಲ್ಲಿ ಪರಿಹರಿಸಬೇಕು ಎಂಬ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ ಹಾಗೂ ಆ ನಿಲುವಿಗೆ ಬದ್ಧವಾಗಿದೆ. ಟ್ರಂಪ್ ಅವರೊಂದಿಗೆ ನಡೆದ ಕರೆಯ ವೇಳೆ, ಪ್ರಧಾನಿ ಮೋದಿ ನವದೆಹಲಿಯು ಪ್ರಾದೇಶಿಕ ಭದ್ರತಾ ವಿಚಾರಗಳಲ್ಲಿ ಹೊರಗಿನ ಹಸ್ತಕ್ಷೇಪವನ್ನು ಒಪ್ಪುವುದಿಲ್ಲ ಎಂದು ಪುನರುಚ್ಚರಿಸಿದರು ಎಂದು ತಿಳಿದು ಬಂದಿದೆ.

ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಂ ಮಿಸ್ರಿ ಅವರು ಈ ನಿಲುವಿಗೆ ಮತ್ತಷ್ಟು ಸ್ಪಷ್ಟತೆ ನೀಡುತ್ತಾ ಹೇಳಿದರು: “ಪಾಕಿಸ್ತಾನ ಸಂಬಂಧಿತ ವಿಷಯಗಳಲ್ಲಿ ಭಾರತ ಯಾವತ್ತೂ ಮಧ್ಯಸ್ಥಿಕೆಯನ್ನು ಒಪ್ಪಿಲ್ಲ; ಈ ವಿಷಯದಲ್ಲಿ ತೃತೀಯ ರಂಗದ ಮಧ್ಯಸ್ಥಿಕೆ ಹಿಂದೆಯೂ ಇರಲಿಲ್ಲ, ಈಗಲೂ ಇಲ್ಲ, ಮುಂದೆಯೂ ಸಹ ಅಂತಹ ಪರಿಸ್ಥಿತಿ ಬರಲು ಸಾಧ್ಯವಿಲ್ಲ.” ಅವರು  ಈ ಸನ್ನಿವೇಶದಲ್ಲಿ ಅಮೆರಿಕದ ಯಾವುದೇ ಸೇನಾ ನಿರ್ಣಯ ಅಥವಾ ವ್ಯಾಪಾರ ಒಪ್ಪಂದದ ಮಾತುಕತೆ ನಡೆದಿಲ್ಲ ಎಂದು ತಿಳಿಸಿದರು.

ಟ್ರಂಪ್ ಅವರು ತಾವು ಯುದ್ಧ ತಡೆಗಟ್ಟಿದ್ದೇವೆ ಎಂದು ಪದೇ-ಪದೇ ಹೇಳುತ್ತಲೇ ಇದ್ದರೂ ಸಹ, ಭಾರತೀಯ ಅಧಿಕಾರಿಗಳು ಈ ಬಗ್ಗೆ ಇಲ್ಲಿಯವರೆಗೂ ಅಧಿಕೃತವಾದ ಹೇಳಿಕೆ ನೀಡಿರಲಿಲ್ಲ. ಆದರೆ ಈಗ ಭಾರತ ಸರ್ಕಾರದ ಉನ್ನತ ಮೂಲಗಳು ಟ್ರಂಪ್ ಹೇಳಿಕೆಯನ್ನು ಸಂಪೂರ್ಣವಾಗಿ ತಿರಸ್ಕರಿವೆ. ಇದರ ಜೊತೆಗೆ ಯುದ್ಧದ ಸಂದರ್ಭದಲ್ಲಿ ಕದನ ವಿರಾಮದ ನಿರ್ಧಾರಕ್ಕೆ ಬರುವುದಕ್ಕೆ ಕಾರಣ ಭಾರತ ಮತ್ತು ಪಾಕಿಸ್ತಾನ ನಡುವಿನ ಸೇನಾ ಮಟ್ಟದ ಸಂವಹನಗಳೆಂದು ಸರ್ಕಾರದ ಉನ್ನತ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ ಹಾಗೂ ಇದರಲ್ಲಿ ಯಾವುದೇ ವಿದೇಶಿ ರಾಷ್ಟ್ರಗಳ ಹಸ್ತಕ್ಷೇಪವಿಲ್ಲ ಎಂದು ಕೂಡ ತಿಳಿಸಿದ್ದಾರೆ.

ಸಂಬಂಧಿತ ಕೊಂಡಿಗಳು: ಇತ್ತೀಚಿನ ಸುದ್ದಿಗಳು, ಅಂತರರಾಷ್ಟ್ರೀಯ ಸುದ್ದಿಗಳು

Hash Tags: #LatestNews #InternationalNews

By ಸುಖೇಶ್ ಶಾನಭಾಗ್ Published: Thursday, June 19, 2025, 8:44 [IST]


Scroll to Top