ಪಾಕಿಸ್ತಾನಕ್ಕೆ ಖಡಕ್ ಸಂದೇಶ ನೀಡಿದ ಪ್ರಧಾನಿ ನರೇಂದ್ರ ಮೋದಿ

By ಸುಖೇಶ್ ಶಾನಭಾಗ್ Published: Tuesday, May 13, 2025, 10:57 [IST]

PM Narendra Modis Warning To Pakistan

ನವದೆಹಲಿ: ಭಯೋತ್ಪಾದಕ ದಾಳಿಯ ಸೇಡು ತೀರಿಸಿಕೊಳ್ಳಲು ಭಾರತ ಮಾಡಿದ 'ಆಪರೇಷನ್ ಸಿಂಧೂರ್' ನಿಂದ ಬುದ್ದಿ ಕಲಿತ ನೆರೆ ದೇಶ ಪಾಕಿಸ್ತಾನ ಇಂದು ಶಾಂತಿಮಂತ್ರ ಜಪಿಸುತ್ತಿದೆ. ಈ ನಡುವೆ ಮೋದಿ ತಮ್ಮ ಭಾಷಣದಲ್ಲಿ ಪಾಕಿಸ್ತಾನಕ್ಕೆ ಖಡಕ್ ಸಂದೇಶವನ್ನು ನೀಡಿದ್ದಾರೆ. ಅವರು ಭಯೋತ್ಪಾದನೆಯನ್ನು ಬಿಟ್ಟು ಬಂದರಷ್ಟೇ ಮಾತುಕತೆಗಳನ್ನು ಮಾಡಬಹುದು. ಭಯೋತ್ಪಾದನೆ ಮತ್ತು ವ್ಯಾಪಾರ ಇನ್ನು ಮುಂದೆ ಒಟ್ಟಿಗೆ ಸಾಗಲಾರದು. ನೀರು ಮತ್ತು ರಕ್ತ ಕೂಡ ಒಟ್ಟಿಗೆ ಸಾಗಲು ಸಾಧ್ಯವಿಲ್ಲ ಎಂದು ಪ್ರಧಾನ ಮಂತ್ರಿ ಮೋದಿ ಪಾಕಿಸ್ತಾನಕ್ಕೆ ಸಂದೇಶ ನೀಡಿದ್ದಾರೆ. 

ಇನ್ನೊಂದು ಸಲ ಭಯೋತ್ಪಾದನೆಯ ಮೂಲಕ ನಮ್ಮ ದೇಶಕ್ಕೆ ತೊಂದರೆ ಕೊಟ್ಟರೆ ಪಾಕಿಸ್ತಾನದ ಒಳಗೆ ನುಗ್ಗಿ ಹೊಡೆಯುತ್ತೇವೆ ಎಂದು ಮೋದಿ ವಾರ್ನಿಂಗ್ ಕೊಟ್ಟಿದ್ದಾರೆ. 

ಮೇ 12ರ ರಾತ್ರಿ 8 ಗಂಟೆಗೆ ಭಾರತವನ್ನು ಉದ್ದೇಶಿಸಿ ಮಾತನಾಡಿದ ಅವರು, "ಆಪರೇಷನ್ ಸಿಂಧೂರದ ನಂತರ ಭಾರತ ಮೂರು ಪ್ರಮುಖವಾದ ನಿರ್ಧಾರಗಳನ್ನು ಕೈಗೊಂಡಿದೆ. ಮೊದಲನೆಯದಾಗಿ, ಭಾರತದ ಮೇಲೆ ಮತ್ತೆ ಪಾಕಿಸ್ತಾನ ದಾಳಿ ಮಾಡಿದರೆ ನಾವು ಅವರಿಗೆ ಯಾವುದೇ ಮುಲಾಜಿಲ್ಲದೆ ಉತ್ತರ ನೀಡುತ್ತೇವೆ. ಯಾವ ಜಾಗದಿಂದ ಉಗ್ರವಾದಿಗಳು ತಯಾರಾಗಿ ಬರುತ್ತಾರೋ ಅದೇ ಜಾಗಗಳಿಗೇ ಹೋಗಿ ನೇರವಾಗಿ ಅವರನ್ನು ಹೊಡೆದು ಹಾಕುತ್ತೇವೆ. ಎರಡನೆಯದ್ದಾಗಿ, ಯಾವುದೇ ರೀತಿಯ ಪರಮಾಣು ಬಾಂಬ್ ಬೆದರಿಕೆಯನ್ನು ಭಾರತ ಇನ್ನು ಮುಂದೆ ಸಹಿಸುವುದಿಲ್ಲ. ಇನ್ನು, ಮೂರನೇಯದಾಗಿ, ನಾವು ಇನ್ನು ಮುಂದೆ ಭಯೋತ್ಪಾದನೆಗೆ ಬೆಂಬಲ ನೀಡುವ ದೇಶ ಹಾಗೂ ಭಯೋತ್ಪಾದನೆಯನ್ನು ಪ್ರತ್ಯೇಕವಾಗಿ ನೋಡುವುದಿಲ್ಲ" ಎಂದು ಪ್ರಧಾನಿ ಮೋದಿ ಹೇಳಿದರು.

ಇದರ ಮೂಲಕ, ಪಾಪಿ ಪಾಕಿಸ್ತಾನದ ಶಾಂತಿಮಾತುಕತೆಯ ಪ್ರಸ್ತಾವನೆಯನ್ನು ಸಾರಾಸಗಟಾಗಿ ಮೋದಿ ತಿರಸ್ಕರಿಸಿದ್ದಾರೆ. "ಇಷ್ಟು ದಿನ ಇದ್ದ ಹಾಗೆ ಇನ್ನು ಮುಂದೆ ಇರಲು ಸಾಧ್ಯವಿಲ್ಲ. ಇನ್ನು ಮುಂದೆ 'ಟೆರರ್ ಆ್ಯಂಡ್ ಟಾಕ್' ಅಂದರೆ 'ಭಯೋತ್ಪಾದನೆ ಮತ್ತು ಮಾತುಕತೆ' ಎರಡೂ ಒಟ್ಟಿಗೆ ಸಾಗುವುದಿಲ್ಲ. 'ಟೆರರ್ ಆ್ಯಂಡ್ ಟ್ರೇಡ್' ಅಂದರೆ 'ಭಯೋತ್ಪಾದನೆ ಮತ್ತು ವ್ಯಾಪಾರ' ಕೂಡ ಒಟ್ಟಿಗೆ ಸಾಗುವುದಿಲ್ಲ. ಅದೇ ರೀತಿ 'ನೀರು ಮತ್ತು ರಕ್ತ' ಸಹ ಒಟ್ಟಿಗೆ ಹರಿಯುವುದಿಲ್ಲ ಎಂದು ಪ್ರಧಾನಿ ಮೋದಿ ನಿಷ್ಠುರವಾಗಿ ಹೇಳಿದರು. ಇನ್ನು ಮುಂದೆ ಪಾಕಿಸ್ತಾನದೊಂದಿಗೆ ಮಾತುಕತೆ ನಡೆದರೆ ನಾವು ಕೇವಲ ಭಯೋತ್ಪಾದನೆಯ ನಿಗ್ರಹದ ಬಗ್ಗೆ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ  (ಪಿಓಕೆ) ಬಗ್ಗೆ ಮಾತ್ರವೇ ಮಾತನಾಡುತ್ತೇವೆ. ಇದನ್ನು ಬಿಟ್ಟು ಬೇರೆ ಯಾವುದೇ ವಿಷಯದ ಬಗ್ಗೆ ಮಾತನಾಡುವುದಿಲ್ಲ" ಎಂದು ಪ್ರಧಾನಿ ಖಡಾಖಂಡಿತವಾಗಿ ತಮ್ಮ ಭಾಷಣದಲ್ಲಿ ಹೇಳಿದರು.

ಭಯೋತ್ಪಾದನೆಯ ನಿರ್ಮೂಲತೆಗೆ ನಡೆದ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ನಂತರ ಹೆದರಿ ನಡುಗುತ್ತಿರುವ ಪಾಕಿಸ್ತಾನ, ಈಗ ಶಾಂತಿ ಮಾತುಕತೆಯ ಪ್ರಸ್ತಾಪ ಮಾಡುವ ಮೂಲಕ ತನ್ನ ಕುತಂತ್ರ ನರಿ ಬುದ್ದಿಯನ್ನು ತೋರಿಸುತ್ತಿದೆ. ಆದರೆ, ಭಯೋತ್ಪಾದಕರನ್ನು ತನ್ನ ಮಡಿಲಲ್ಲಿ ಇಟ್ಟುಕೊಂಡು ಸಾಕಿ, ಬೆಳೆಸುವಂಥ ಕಡು ನೀಚ ಕೆಲಸವನ್ನು ಪಾಕಿಸ್ತಾನ ಬಿಟ್ಟರೆ ಎಲ್ಲವೂ ಸರಿಹೋಗುತ್ತದೆ. ಅದು ಈಗ ಇರುವ ದುಸ್ಥಿತಿಯಿಂದ ಮೇಲೆ ಬರಲು ಈ ಮಾರ್ಗವನ್ನು ಬಿಟ್ಟು ಪಾಕಿಸ್ತಾನಕ್ಕೆ ಬೇರೆ ಯಾವುದೇ ದಾರಿ ಇಲ್ಲ, ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. 

'ಪಾಕಿಸ್ತಾನದ ಒಳಗೆ ನುಗ್ಗಿ ಹೊಡೆಯುತ್ತೇವೆ'

"ಆತಂಕವಾದದ ವಿರುದ್ಧ ನಡೆದ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಇಡೀ ಭಾರತದ ಜನರ ಭಾವನೆಗಳ ಪ್ರತೀಕವಾಗಿದೆ. ಮೇ 6ರ ಮಧ್ಯರಾತ್ರಿ ಹಾಗೂ ಮೇ 7ರ ನಡುವಿನ ಮಧ್ಯರಾತ್ರಿ ಇಡೀ ಜಗತ್ತು ಭಯೋತ್ಪಾದನೆಯ ವಿರುದ್ಧ ನಮ್ಮ ಪ್ರತೀಕಾರ ಏನಾಗಿತ್ತು ಎಂಬುದನ್ನು ಕಣ್ಣಾರೆ ನೋಡಿತು. ಪಾಕಿಸ್ತಾನದ 9 ಉಗ್ರರ ತರಬೇತಿ ಶಿಬಿರಗಳನ್ನು ನಮ್ಮ ಸೈನ್ಯಗಳು ಛಿದ್ರ ಛಿದ್ರ ಮಾಡಿ, ಅವರು ಇದನ್ನು ಕನಸು ಮನಸಿನಲ್ಲೂ ಊಹೆ ಮಾಡಲು ಸಾಧ್ಯವಾಗದಂತೆ ಏಟನ್ನು ಕೊಟ್ಟವು. ಆದರೆ, ನಮ್ಮ ನಿರ್ಧಾರ ಮಾತ್ರ ಸ್ಪಷ್ಟವಾಗಿತ್ತು. ನಮಗೆ ನಮ್ಮ ದೇಶ ಮೊದಲು ಆಗಿತ್ತು. ಇನ್ನು ಮುಂದೆಯೂ ಅದೇ ರೀತಿ. ನಮಗೆ ನಮ್ಮ ದೇಶ ಮೊದಲು. ನಮ್ಮ ಜನತೆ ಮೊದಲು. ಮತ್ತೊಮ್ಮೆ ನಮ್ಮ ತಂಟೆಗೆ ಬಂದರೆ ಪಾಕಿಸ್ತಾನದ ಒಳಗೆ ನುಗ್ಗಿ ಹೊಡೆಯುತ್ತೇವೆ" ಎಂದು ನರೇಂದ್ರ ಮೋದಿ ಹೇಳಿದರು.

PM Narendra Modis Warning To Pakistan

ಇದರ ಜೊತೆಗೆ, ಪಾಕಿಸ್ತಾನಕ್ಕೆ ಎಚ್ಚರಿಕೆ ಕೊಟ್ಟ ಮೋದಿ, "ಆಪರೇಷನ್ ಸಿಂಧೂರ್ ನಲ್ಲಿ ಸಾವನ್ನಪ್ಪಿದ ಉಗ್ರರಿಗೆ ಸರ್ಕಾರಿ ಗೌರವಗಳೊಂದಿಗೆ ಪಾಕಿಸ್ತಾನದಲ್ಲಿ ಮಣ್ಣುಮಾಡಲಾಗಿದೆ. ಅದರಲ್ಲಿ ಪಾಕಿಸ್ತಾನ ಸೈನ್ಯದ ಅಧಿಕಾರಿಗಳೂ ಸಹ ಭಾಗವಹಿಸಿದ್ದಾರೆ. ಪಾಕಿಸ್ತಾನವು ಭಯೋತ್ಪಾದಕ ದೇಶ ಎನ್ನುವುದಕ್ಕೆ ಇದಕ್ಕಿಂತ ದೊಡ್ಡ ಸಾಕ್ಷ್ಯ ಬೇರೊಂದಿಲ್ಲ. ಪಾಕಿಸ್ತಾನ ಸೇನೆ ಮತ್ತು ಅಲ್ಲಿನ ಸರ್ಕಾರ ಜೊತೆಯಾಗಿ ಇಂದು ಉಗ್ರವಾದಿಗಳಿಗೆ ಆಶ್ರಯ ಕೊಟ್ಟಿವೆ. ಆದರೆ, ಅದೇ ಉಗ್ರವಾದಿಗಳು ಈಗ ಪಾಕಿಸ್ತಾನವನ್ನು ಮುಗಿಸುತ್ತಿವೆ. ಹಾಗಾಗಿ, ಈಗಲಾದರೂ ಪಾಕಿಸ್ತಾನ ಎಚ್ಚೆತ್ತುಕೊಂಡು ಬುದ್ದಿ ಕಲಿಯಲಿ" ಎಂದು ಬುದ್ಧಿಮಾತು ಹೇಳಿದರು.

ಇದರ ಮುಖಾಂತರ ವ್ಯಾಪಾರ - ವಹಿವಾಟು ಮಾತ್ರವಲ್ಲದೆ, ಈಗಾಗಲೇ ಪಾಕಿಸ್ತಾನಕ್ಕೆ ನಿಲ್ಲಿಸಲಾಗಿರುವ ಸಿಂಧೂ ನದಿಯ ನೀರನ್ನು ಇನ್ನು ಮುಂದೆಯೂ ಸಹ ಬಿಡುವುದಿಲ್ಲ ಎಂದು ಪ್ರಧಾನಿ ಮೋದಿ ನೇರವಾಗಿ ಹೇಳಿದ್ದಾರೆ. ಜಮ್ಮು ಕಾಶ್ಮೀರದ ಪಹಲ್ಗಾಮ್ ನಲ್ಲಿ ಉಗ್ರರ ದಾಳಿಯಾದ ಬೆನ್ನಲ್ಲೇ ಭಾರತ ಪಾಕಿಸ್ತಾನದ ವಿರುದ್ಧ ಹಲವಾರು ನಿರ್ಬಂಧಗಳನ್ನು ಹಾಕಿ ಕಠಿಣವಾದ ಕ್ರಮಗಳನ್ನು ಕೈಗೊಂಡಿತ್ತು. ಅದರಲ್ಲೊಂದು - ಸಿಂಧೂ ನದಿ ಒಪ್ಪಂದ ಅಮಾನತು ಮಾಡಿದ್ದು.ಈ ನಿರ್ಧಾರದ ಪ್ರಕಾರ , ಪಾಕಿಸ್ತಾನಕ್ಕೆ ಭಾರತದಿಂದ ಹರಿಯುತ್ತಿದ್ದ ಸಿಂಧೂ ನದಿಯ ನೀರನ್ನು ಸಂಪೂರ್ಣವಾಗಿ ನಿಲ್ಲಿಸಲಾಗಿದೆ.

ಭಾರತೀಯ ಸೇನಾ ಪಡೆಗಳಿಗೆ ಮೋದಿಯಿಂದ ಅಭಿನಂದನೆ

ಇದೇ ವೇಳೆ, ಆತಂಕಿಗಳ ವಿರುದ್ಧ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಮುಗಿಸಿದ್ದಕ್ಕಾಗಿ ಭಾರತದ ಮೂರು ಸೇನಾ ಪಡೆಗಳಾದ ಭೂಸೇನೆ, ನೌಕಾಪಡೆ ಹಾಗೂ ವಾಯುಸೇನೆಗಳಿಗೆ ಪ್ರಧಾನಿ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸಿದರು. "ಮೂರು ಸೇನಾ ಪಡೆಗಳಿಗೆ, ಏಜೆನ್ಸಿಗಳಿಗೆ, ವಿಜ್ಞಾನಿಗಳಿಗೆ ಮನಃಪೂರ್ವಕವಾದ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇನೆ. ನಮ್ಮ ಎಲ್ಲಾ ಸೈನಿಕರು ಆಪರೇಷನ್ ಸಿಂಧೂರ್ ಗುರಿಯನ್ನು ಮುಟ್ಟಿದ್ದಾರೆ. ಅದಕ್ಕಾಗಿ ಅವರು ಅಸಾಮಾನ್ಯ ಶೌರ್ಯವನ್ನು ಮತ್ತು ಸಾಹಸವನ್ನು ಪ್ರದರ್ಶಿಸಿದ್ದಾರೆ. ಅವರ ವೀರತ್ವ, ಅವರ ಸಾಹಸ, ಅವರ ಪರಾಕ್ರಮ ಮತ್ತು ಶೌರ್ಯವನ್ನು ಈ ದೇಶದ ಪ್ರತಿಯೊಬ್ಬ ತಾಯಿ, ಸಹೋದರಿಯರಿಗೆ ಅರ್ಪಿಸುತ್ತೇನೆ" ಎಂದರು.

'ಅವರಿಗೆ ನಮ್ಮ ಹೆಣ್ಣು ಮಕ್ಕಳ ಹಣೆಯ ಮೇಲಿನ ಕುಂಕುಮ ಅಳಿಸಿದ್ದರ ದುಷ್ಪರಿಣಾಮದ ಅರಿವಾಗಿದೆ'

"ಏ. 22ರಂದು ಪಹಲ್ಗಾಮ್ ನಲ್ಲಿ ನಡೆದ ಉಗ್ರರ ಅಟ್ಟಹಾಸ ಒಂದು ಕ್ರೂರವಾದ ಘಟನೆಗೆ ಸಾಕ್ಷಿಯಾಗಿತ್ತು. ಆ ಘಟನೆಯಿಂದ ಇಡೀ ದೇಶದ ಜನತೆ ಒಗ್ಗಟ್ಟಾಗಿ ಜಾತಿ, ಮತ, ಭೇದ ಇಲ್ಲದೇ ಭಯೋತ್ಪಾದನೆಯ ವಿರುದ್ಧ ಸಿಡಿದೆದ್ದಿತು. ನಮ್ಮ ದೇಶಬಾಂಧವರನ್ನು ಅವರ ಪತ್ನಿಯರು, ಚಿಕ್ಕ ಮಕ್ಕಳ ಮುಂದೆಯೇ ಕೊಂದಿದ್ದಾರೆಂದರೆ ಅವರ ಕ್ರೂರತ್ವ ಮತ್ತು ರಾಕ್ಷಸ ಮನೋಭಾವನೆ ಎಷ್ಟಿರಬೇಕು ಎಂಬುದನ್ನು ನಾವು ಊಹೆ ಮಾಡಬಹುದು. ಅದು ನಮ್ಮ ಸ್ವಾಭಿಮಾನವನ್ನು ಕೆಣಕುವಂತೆ ಮಾಡಿತು. ಅದೇ ದಿನ ನಾವು ಉಗ್ರವಾದಿಗಳನ್ನು ಮಟ್ಟ ಹಾಕಲು ಪ್ರತಿಜ್ಞೆ ಮಾಡಿದೆವು. ಅದರ ಪರಿಣಾಮವೇ ಆಪರೇಷನ್ ಸಿಂಧೂರ್. ಇದೊಂದು ಕಾರ್ಯಾಚರಣೆಯ ಮುಖಾಂತರ, ಉಗ್ರವಾದಿಗಳು ಹಾಗೂ ಅವರ ಸಂಘಟನೆಗಳಿಗೆ, ನಮ್ಮ ಅಕ್ಕ ತಂಗಿಯರ, ಹೆಣ್ಣು ಮಕ್ಕಳ  ಹಣೆಯ ಮೇಲಿನ ಕುಂಕುಮ ಅಳಿಸಿದರೆ ಅದರ ದುಷ್ಪರಿಣಾಮ ಏನಾಗುತ್ತದೆ ಎಂಬುದು ಅರ್ಥವಾಗಿದೆ" ಎಂದು ಮೋದಿ ಹೇಳಿದರು.

'ಅವು ಕೇವಲ ಪಾಕಿಸ್ತಾನದ ಕೇಂದ್ರಗಳಲ್ಲ, ಅವು ಉಗ್ರರ ವಿಶ್ವವಿದ್ಯಾನಿಲಯಗಳು'

ಪಾಕಿಸ್ತಾನದಲ್ಲಿ ಭಾರತೀಯ ಸೇನಾ ಪಡೆಗಳು ಉಗ್ರರ ತರಬೇತಿ ಶಿಬಿರಗಳನ್ನು ಹೊಡೆದುರುಳಿಸಿದ್ದು ಇಡೀ ವಿಶ್ವಕ್ಕೆ ಒಂದು ರೀತಿಯ ಉಪಕಾರ ಮಾಡಿದಂತೆ ಆಗಿದೆ ಎಂದು ನರೇಂದ್ರ ಮೋದಿ ಹೇಳಿದರು. "ನಾವು ಹೊಡೆದುರುಳಿಸಿರುವ ಆತಂಕವಾದಿಗಳ ತರಬೇತಿ ಶಿಬಿರಗಳು ಇಡೀ ಜಗತ್ತಿನ ಉಗ್ರರಿಗೆ ವಿಶ್ವವಿದ್ಯಾಲಯಗಳಂತೆ ಆಗಿದ್ದವು ಹಾಗೂ ಜಗತ್ತಿನಲ್ಲಿ ಇದುವರೆಗೆ ನಡೆದಿರುವ ಉಗ್ರರ ದಾಳಿಗಳಿಗೆ ಈ ತರಬೇತಿ ಕೇಂದ್ರಗಳೊಂದಿಗೆ ಒಂದಲ್ಲ ಒಂದು ರೀತಿ ನಂಟು ಇದೆ ಎಂದು ಈ ಹಿಂದೆಯೂ ಸಹ ಅನೇಕ ಬಾರಿ ಸಾಭೀತಾಗಿದೆ. ಹಾಗಾಗಿಯೇ ಅಂಥ 100ಕ್ಕೂ ಹೆಚ್ಚು ಉಗ್ರರನ್ನು ಅವರ ತರಬೇತಿ ಶಿಬಿರಗಳ ಜೊತೆ ಜೊತೆಗೆ  ಹೊಡೆದುಹಾಕಿದ್ದೇವೆ" ಎಂದು ಹೇಳಿದರು.

ಪಾಕಿಸ್ತಾನ ಸರ್ಕಾರವನ್ನು ಮತ್ತು ಸೇನೆಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಮೋದಿ, "ಪಾಕಿಸ್ತಾನವೆಂದರೆ, ಅದೊಂದು ಉಗ್ರರ ಅಡ್ಡೆ. ಅವರೆಲ್ಲರೂ ಪಾಕಿಸ್ತಾನದಲ್ಲಿ ಸ್ವೇಚ್ಛೆಯಿಂದ ಓಡಾಡಿಕೊಂಡಿದ್ದವರು. ಉಗ್ರರ ತರಬೇತಿ ಕೇಂದ್ರಗಳಲ್ಲಿ ಜೊತೆಯಾಗಿ ಭಾರತದ ವಿರುದ್ಧ ಷಡ್ಯಂತ್ರಗಳನ್ನು ಮಾಡುತ್ತಿದ್ದರು. ಅಂಥವರನ್ನೆಲ್ಲಾ ಒಂದೇ ರಾತ್ರಿಯಲ್ಲಿ ಇಲ್ಲವಾಗಿಸಿ ಮಣ್ಣು ಪಾಲಾಗುವಂತೆ ಮಾಡಿದ್ದೇವೆ. ಅದರಿಂದ ಪಾಕಿಸ್ತಾನ ಹತಾಶೆಗೆ ಜಾರಿದೆ. ದುಃಖದ ಮಡುವಿನಲ್ಲಿ ಮುಳುಗಿದೆ. ಆದರೆ, ಅಂಥ ಸಂದರ್ಭದಲ್ಲಿ ಪಾಕಿಸ್ತಾನ ಮತ್ತೊಂದು ಸ್ವಯಂಕೃತವಾದ ತಪ್ಪು ಮಾಡಿತು. ಭಯೋತ್ಪಾದನೆಯ ವಿರುದ್ಧದ ನಮ್ಮ ಹೋರಾಟಕ್ಕೆ ಬೆಂಬಲ ನೀಡುವ ಬದಲು ಅದು ನಮ್ಮ ವಿರುದ್ಧವೇ ದಾಳಿ ಮಾಡಿತು" ಎಂದು ತಿಳಿಸಿದರು.

"ಪಾಕಿಸ್ತಾನ ನಮ್ಮ ದೇವಾಲಯಗಳು, ಗುರುದ್ವಾರಗಳು, ಕಾಲೇಜುಗಳು, ಮುಗ್ದ ಜನರು, ಸೈನಿಕರ ನೆಲೆಗಳ ಮೇಲೆ ಗುರಿಯಿಟ್ಟು ದಾಳಿ ನಡೆಸಿತು. ಇದರ ಪರಿಣಾಮ, ಪಾಕಿಸ್ತಾನದ ಇವತ್ತು ಜಂಘಾಬಲವೇ ಉಡುಗುವಂತೆ ಆಘಾತವನ್ನು ನೀಡಲಾಗಿದೆ. ಇದನ್ನೇ ಇಡೀ ಜಗತ್ತೇ ನೋಡಿದೆ ಮತ್ತು ಸಾಕ್ಷಿಯಾಗಿದೆ. ಪಾಕಿಸ್ತಾನದ ಡ್ರೋನ್ ಗಳನ್ನು, ಕ್ಷಿಪಣಿಗಳನ್ನು ನಾವು ಹೇಗೆ ಹೊಡೆದುರುಳಿಸಿದ್ದೇವೆ ಎಂದು ಇಡೀ ವಿಶ್ವವೇ ಗಮನಿಸಿದೆ. ಪಾಕಿಸ್ತಾನವು ನಮ್ಮ ಸೀಮೆಯ ಮೇಲೆ ದಾಳಿ ನಡೆಸಿದರೆ, ನಾವು ಅವರ ದೇಶದ ಒಳಗೆ ಹೋಗಿ ದಾಳಿ ಮಾಡಿದ್ದೇವೆ" ಎಂದು ಅವರು ವಿವರಿಸಿದರು.

'ಪಾಕಿಸ್ತಾನದ ದುರಹಂಕಾರವನ್ನು ನುಚ್ಚುನೂರು ಮಾಡಿದ್ದೇವೆ'

ಪಾಕಿಸ್ತಾನದ ವಾಯುನೆಲೆಗಳ ಮೇಲೆ ಅವರಿಗೆ ಭಾರೀ ಜಂಭವಿತ್ತು. ಆದರೆ ನಾವು ಆ ವಾಯುನೆಲೆಗಳನ್ನೇ ನಾಶ ಮಾಡಿದ್ದೇವೆ. ಅವರ ಜಂಭವನ್ನು ನುಚ್ಚು ನೂರು ಮಾಡಿದ್ದೇವೆ. ಅರ್ಥಾತ್, ಅವರ ವಾಯುನೆಲೆಗಳನ್ನೆಲ್ಲಾ ಅಕ್ಷರಶಃ ಧ್ವಂಸ ಮಾಡಿದ್ದೇವೆ. ಇದನ್ನು ಪಾಕಿಸ್ತಾನ ಕನಸಿನಲ್ಲೂ ಸಹ ನಿರೀಕ್ಷೆ ಮಾಡಿರಲಿಲ್ಲ. ಆಗ ಪಾಕಿಸ್ತಾನಕ್ಕೆ ನಿದ್ದೆಯಿಂದ ಎಚ್ಚರವಾಯಿತು. ಅದು ಬದುಕುಳಿಯುವ ದಾರಿಯನ್ನು ಹುಡುಕಾಡಲು ಪ್ರಾರಂಭಿಸಿತು. ಅದರ ಫಲವಾಗಿ, ಮೇ 10ರಂದು ಪಾಕಿಸ್ತಾನದ ಸೇನೆಯು ನಮ್ಮ ಡಿಜಿಎಂಒಗೆ ಫೋನಿನ ಮೂಲಕ ಕದನವಿರಾಮಕ್ಕೆ ಪ್ರಸ್ತಾವನೆ ಇಟ್ಟಿತು ಎಂದು ಪ್ರಧಾನಿ ನರೇಂದ್ರ ಮೋದಿ ತಮ್ಮ ಭಾಷಣದಲ್ಲಿ ಹೇಳಿದ್ದಾರೆ.

'ನಮ್ಮ ಸೇನಾ ಶಕ್ತಿ ಮತ್ತು ಅದರ ಸಾಮರ್ಥ್ಯ ಈಗ ಜಗಜ್ಜಾಹೀರಾಗಿದೆ'

ಆಪರೇಷನ್ ಸಿಂಧೂರ್ ಕಾರ್ಯಾಚರಣೆಯಿಂದ ನಮ್ಮ ಸೇನಾ ಶಕ್ತಿ ಈಗ ಇಡೀ ಜಗತ್ತಿಗೆ ತಿಳಿದಿದೆ. ನಮ್ಮ ಮೇಡ್ ಇನ್ ಇಂಡಿಯಾ ಶಸ್ತ್ರಾಸ್ತ್ರಗಳ ತಾಕತ್ತೇನು ಎಂಬುದನ್ನು ಸಮಗ್ರ ವಿಶ್ವ ಗಮನಿಸಿದೆ. 21ನೇ ಶತಮಾನದಲ್ಲಿ ಮೇಡ್ ಇನ್ ಇಂಡಿಯಾ ಶಸ್ತ್ರಾಸ್ತ್ರಗಳ ಶಕ್ತಿ ಏನೆಂಬುದು ಈಗ ಎಲ್ಲರಿಗೂ ಅರ್ಥವಾಗಿದೆ. ಇದು ನಮ್ಮ ದೇಶಕ್ಕೆ ಮತ್ತು ನಮ್ಮ ಸೈನ್ಯಕ್ಕೆ ನಿಜಕ್ಕೂ ಹೆಮ್ಮೆಯ ವಿಚಾರ.

"ಇಂಥ ಕಠಿಣವಾದ ಸಂದರ್ಭಗಳಲ್ಲಿ ನಮ್ಮ ಏಕತೆಯೇ ನಮ್ಮ ಶಕ್ತಿಯಾಗಿದೆ. ಈ ಯುಗ ಯುದ್ಧದ ಯುಗ ಅಲ್ಲ ಎನ್ನುವುದು ಸತ್ಯ. ಆದರೆ, ಈ ಯುಗ ಆತಂಕವಾದಿಗಳ ಯುಗವೂ ಸಹ ಅಲ್ಲ ಎನ್ನುವುದು ಅಷ್ಟೇ ನಿಜ. ಉಗ್ರವಾದಿಗಳ ವಿರುದ್ಧ ನಾವು ಶೂನ್ಯ ಸಹಿಷ್ಣುತೆಯನ್ನು ಹೊಂದಿರುತ್ತೇವೆ. ಇದು ನಾವು ಜಗತ್ತಿಗೆ ಕೊಡುತ್ತಿರುವ ಆಶ್ವಾಸನೆ. ಇಂದು ಬುದ್ಧ ಪೂರ್ಣಿಮೆಯ ಸುದಿನ. ಭಗವಾನ್ ಬುದ್ಧನು ನಮಗೆ ಶಾಂತಿಯ ಮಾರ್ಗವನ್ನು ತೋರಿಸಿದ್ದಾರೆ. ಮನುಷ್ಯರು ಈ ಶಾಂತಿಯ ಮಾರ್ಗದಲ್ಲಿ ಮುನ್ನಡೆಯಬೇಕು. ಇಂಥ ಸಂದರ್ಭದಲ್ಲಿ ಭಾರತವು ಶಕ್ತಿಶಾಲಿಯಾಗಿರುವುದು ಅತ್ಯಂತ ಅವಶ್ಯಕವಾಗಿದೆ. ಅಷ್ಟೇ ಅಲ್ಲ ನಮ್ಮ ಮೇಲೆ ಬಿದ್ದವರಿಗೆ ಬುದ್ಧಿ ಕಲಿಸುವುದರ ಅವಶ್ಯಕತೆಯೂ ಸಹ ಹೆಚ್ಚಾಗಿದೆ. ಈ ಸಂದರ್ಭದಲ್ಲಿ ನಾನು ನಮ್ಮ ಸೇನಾ ಪಡೆಗಳಿಗೆ ಸೆಲ್ಯೂಟ್ ಮಾಡಲು ಇಚ್ಚಿಸುತ್ತೇನೆ. ಎಲ್ಲರಿಗೂ ಧನ್ಯವಾದ" ಎಂದು ಹೇಳಿ ಮಾತು ಮುಗಿಸಿದ ನರೇಂದ್ರ ಮೋದಿ, ಕಡೆಯಲ್ಲಿ "ಭಾರತ್ ಮಾತಾಕೀ ಜೈ" ಎಂದು ಮೂರು ಬಾರಿ ಹೇಳಿದರು.

By ಸುಖೇಶ್ ಶಾನಭಾಗ್ Published: Tuesday, May 13, 2025, 10:57 [IST]


Scroll to Top