ಹನುಮಂತನ ಜನ್ಮ ಕಥೆ: ವಾನರ ರಾಜ ಕೇಸರಿ ಮತ್ತು ಅಂಜನಾ ದೇವಿ ದಂಪತಿಗಳ ಪುತ್ರನಾದ ಪವನ ಪುತ್ರ ಹನುಮಂತನು ಭಗವಾನ್ ಶ್ರೀ ರಾಮನ ಮೇಲೆ ಅಪಾರವಾದ ಭಕ್ತಿಯನ್ನು ಹೊಂದಿದ್ದನು. ತನ್ನ ಸ್ವಾರ್ಥವಿಲ್ಲದ ಸೇವೆ ಮತ್ತು ಅಪರಿಮಿತವಾದ ಭಕ್ತಿಯ ಮೂಲಕ, ಹನುಮಂತನು ಶ್ರೀ ರಾಮ ಮತ್ತು ಅವನ ಕುಟುಂಬದ ಪ್ರೀತಿಯನ್ನು ಗೆಲ್ಲುತ್ತಾನೆ. ಹನುಮಂತನು ಜನಿಸಿದ ದಿನವನ್ನು ಜಗತ್ತಿನ ಎಲ್ಲೆಡೆ ಹನುಮಾನ್ ಜಯಂತಿ ಎಂದು ಆಚರಿಸಲಾಗುತ್ತದೆ. ಹನುಮಂತನ ಜನನದ ಸ್ವಾರಸ್ಯಕಾರಿಯಾದ ಕಥೆಯನ್ನು ನಾವು ನಿಮಗೆ ತಿಳಿಸಲು ಬಯಸುತ್ತೇವೆ.
ಶ್ರೀ ರಾಮನ ಭಕ್ತನಾದ ಹನುಮಂತನ ಜನ್ಮ ಕಥೆ:
ಒಂದಾನೊಂದು ಕಾಲದಲ್ಲಿ, ಮೇರು ಪರ್ವತಗಳಲ್ಲಿ ಗೌತಮ ಎಂಬ ಮಹಾನ್ ಋಷಿ ವಾಸವಾಗಿದ್ದರು. ಗೌತಮ ಮುನಿಗಳ ಆಶ್ರಮದ ಬಳಿ ವಾನರ ರಾಜ ಕೇಸರಿ ಮತ್ತು ಅಂಜನಾ ಎಂಬ ವಾನರ ದಂಪತಿಗಳು ವಾಸಿಸುತ್ತಿದ್ದರು. ಅಂಜನಾ ಒಂದು ಕಾಲದಲ್ಲಿ ಇಂದ್ರನ ಆಸ್ಥಾನದಲ್ಲಿ ಸ್ವರ್ಗೀಯ ಕನ್ಯೆಯಾಗಿದ್ದಳು. ಅವಳು ಶಾಪಗ್ರಸ್ತಳಾಗಿ ವಾನರ ಮಹಿಳೆಯಾಗಿ ರೂಪಾಂತರಗೊಂಡಿದ್ದಳು. ಅವಳು ಮಹಾಶಿವನ ಅವತಾರಕ್ಕೆ ಜನ್ಮ ನೀಡಿದರೆ ಮಾತ್ರ ಆ ಶಾಪದಿಂದ ವಿಮೋಚನೆ ಹೊಂದುತ್ತಾಳೆ.
ಅಂಜನಾ ದೇವಿಯ ಶಾಪಕ್ಕೆ ಕಾರಣ ಏನು?
ಒಮ್ಮೆ, ಅಂಜನಾ ದೇವಿ ಭೂಮಿಯ ಮೇಲೆ ಸುಮ್ಮನೆ ಅಲೆದಾಡುತ್ತಿರುವಾಗ, ದಟ್ಟವಾದ ಕಾಡಿನಲ್ಲಿ ಆಳವಾಗಿ ಧ್ಯಾನದಲ್ಲಿ ನಿರತನಾಗಿದ್ದ ಕೋತಿಯೊಂದು ಕಾಣಿಸುತ್ತದೆ. ಕ್ಷಣಾರ್ಧದಲ್ಲಿ, ಕೋತಿ ಪವಿತ್ರ ಋಷಿಯಂತೆ ವರ್ತಿಸುವುದನ್ನು, ಮತ್ತೊಮ್ಮೆ ಕೋತಿಯಾಗಿ ಬದಲಾಗುವುದನ್ನು ಅಂಜನಾ ದೇವಿ ನೊಡುತ್ತಾಳೆ. ಅದನ್ನು ನೋಡಿದ ಅವಳಿಗೆ ತನ್ನ ನಗುವನ್ನು ನಿಯಂತ್ರಿಸಲು ಸಾದ್ಯವಾಗದೇ ಅವಳು ಕೋತಿಯನ್ನು ಅಪಹಾಸ್ಯ ಮಾಡುತ್ತಾಳೆ. ಆದರೆ ಕೋತಿಯ ರೂಪದಲ್ಲಿ ಇದ್ದ ಋಷಿಗಳು ಅವಳ ಮೂರ್ಖತನದ ನಡವಳಿಕೆಯನ್ನು ನಿರ್ಲಕ್ಷಿಸಿ ತನ್ನ ಧ್ಯಾನವನ್ನು ಮುಂದುವರೆಸುತ್ತಾರೆ. ಅವಳು ತನ್ನ ನಗುವನ್ನು ತಡೆಯಲಾರದೆ, ಆ ಕೋತಿಯ ಮೇಲೆ ಕೆಲವು ಕಲ್ಲುಗಳನ್ನು ಎಸೆಯುತ್ತಾಳೆ. ಆ ಪವಿತ್ರ ಕೋತಿ ತನ್ನ ತಾಳ್ಮೆಯನ್ನು ಕಳೆದುಕೊಳ್ಳುವವರೆಗೂ ಕಲ್ಲುಗಳನ್ನು ಎಸೆಯುತ್ತಾ, ಗೇಲಿ ಮಾಡಿ ಅಪಹಾಸ್ಯ ಮಾಡುತ್ತಾಳೆ.
ಅಪಹಾಸ್ಯವನ್ನು ತಡೆಯಲಾರದೆ ಧ್ಯಾನಕ್ಕೆ ಭಂಗವಾಗಿ ಆ ಕೋತಿಯು ಕಣ್ಣುಗಳನ್ನು ತೆರೆಯುತ್ತದೆ. ಅದು ಭೀಕರವಾದ ಕೋಪದಿಂದ ಹೊಳೆಯುತ್ತಿತ್ತು. ಅದು ವಾಸ್ತವದಲ್ಲಿ ಶಕ್ತಿಶಾಲಿಯಾದ ಪವಿತ್ರ ಋಷಿಯಾಗಿದ್ದು, ತನ್ನ ಆಧ್ಯಾತ್ಮಿಕ ಧ್ಯಾನವನ್ನು ಮಾಡಲು ತನ್ನನ್ನು ತಾನು ಕೋತಿಯಾಗಿ ರೂಪಾಂತರವಾಗಿ ಧ್ಯಾನದಲ್ಲಿ ತಲ್ಲೀನನಾಗಿದ್ದನು. ಋಷಿಯು ಅಂಜನಾ ದೇವಿಗೆ ಕೋಪದಿಂದ ಮುಂದಿನ ಜನ್ಮದಲ್ಲಿ ಕೋತಿಯಾಗುವಂತೆ ಶಾಪ ನೀಡುತ್ತಾನೆ ಮತ್ತು ಅವಳು ಮಹಾಶಿವನ ಅವತಾರವಾದ ಮಗನಿಗೆ ಜನ್ಮ ನೀಡಿದರೆ ಮಾತ್ರ ಅವಳು ಆ ಶಾಪದಿಂದ ಮುಕ್ತಳಾಗುತ್ತಾಳೆ ಎಂದು ಹೇಳುತ್ತಾನೆ.
ಅಂಜನಾ ದೇವಿಯ ಮಗನಾಗಿ ಹನುಮಂತನ ಜನನ:
ಮುಂದಿನ ಜನ್ಮದಲ್ಲಿ ಕೋತಿಯ ರೂಪದಲ್ಲಿ ಜನಿಸಿದ ಅಂಜನಾ ದೇವಿ ಮತ್ತು ಕೋತಿಗಳ ರಾಜ ಕೇಸರಿ ಪರಸ್ಪರ ಪ್ರೀತಿಸಿ ಮದುವೆಯಾಗುತ್ತಾರೆ. ಆದರೆ ಅವರಿಗೆ ಹೆಚ್ಚು ಕಾಲ ಮಕ್ಕಳಾಗದೇ ಚಿಂತಾಕ್ರಾಂತರಾಗುತ್ತಾರೆ. ಈ ಸಮಸ್ಯೆಯಿಂದ ಮುಕ್ತಿ ಪಡೆಯಲು ಅವರು ಮಹಾ ಋಷಿ ಮತಂಗರನ್ನು ಭೇಟಿಯಾಗುತ್ತಾರೆ. ಮತಂಗ ಋಷಿಗಳು ಅವರ ಸಮಸ್ಯೆಗೆ ಪರಿಹಾರವನ್ನು ಸೂಚಿಸುತ್ತಾರೆ. ಆ ಪರಿಹಾರದ ಪ್ರಕಾರ ಹನ್ನೆರಡು ವರ್ಷಗಳ ಕಾಲ ಶಿವನನ್ನು ಪೂಜಿಸಲು ಅಂಜನಾ ದೇವಿಗೆ ಸಲಹೆ ನೀಡುತ್ತಾರೆ. ಅಂಜನಾ ದೇವಿ ಮಹಾಶಿವನನ್ನು ಅಪಾರವಾದ ಶ್ರದ್ಧೆ, ಭಕ್ತಿಯಿಂದ ಪೂಜಿಸಲು ಮತ್ತು ಧ್ಯಾನಿಸಲು ಪ್ರಾರಂಭಿಸುತ್ತಾಳೆ.
ಆಹಾರ ಮತ್ತು ನೀರನ್ನೂ ಸಹ ಸೇವಿಸದೇ ಅಂಜನಾ ದೇವಿ ಶಿವನ ಧ್ಯಾನ ಮಾಡುತ್ತಾಳೆ. ಅವಳ ಭಕ್ತಿಪೂರ್ವಕ ಪ್ರಾರ್ಥನೆಗಳು ಮತ್ತು ಶ್ರದ್ಧೆಯಿಂದ ಮಡಿದ ಧ್ಯಾನವು ಶೀಘ್ರದಲ್ಲೇ ಫಲ ನೀಡುತ್ತದೆ. ಅವಳ ಪ್ರಾರ್ಥನೆಗಳಿಂದ ಪ್ರಭಾವಿತನಾದ ಪರಮಶಿವನು ಪ್ರಕಟವಾಗುತ್ತಾನೆ ಮತ್ತು ಅವಳಿಗೆ ಅಮರನಾದ ಮಗನನ್ನು ಜನ್ಮ ನೀಡುವಂತೆ ಅನುಗ್ರಹ ನೀಡುತ್ತಾನೆ.
ಮತ್ತೊಂದೆಡೆ, ದೂರದ ಅಯೋಧ್ಯೆ ರಾಜ್ಯದಲ್ಲಿ, ಅಯೋಧ್ಯೆಯ ರಾಜ ದಶರಥನು ಅಗ್ನಿಯಿಂದ, ದೈವಿಕ ಶಕ್ತಿಯಿಂದ ಆಶೀರ್ವಾದ ಪಡೆದ ಮಕ್ಕಳನ್ನು ಪಡೆಯಲು ಧಾರ್ಮಿಕ ಕಾರ್ಯವಾದ ಅಶ್ವಮೇಧ ಯಾಗವನ್ನು ಮಾಡುತ್ತಿದ್ದನು. ಆ ಅಶ್ವಮೇಧ ಯಾಗದಿಂದ ಬರುವ ಸಿಹಿಯಾದ ಫಲವನ್ನು ಅವನ ತನ್ನ ಮೂವರು ಪತ್ನಿಯರಲ್ಲಿ ಹಂಚಿಕೊಳ್ಳಬೇಕಾಗಿತ್ತು. ಆದರೆ ವಾಯು ದೇವ ಮತ್ತು ಶಿವನ ಸೂಚನೆಯ ಮೇರೆಗೆ, ಅವನು ಅಂಜನಾ ದೇವಿಗೆ ಆ ಸಿಹಿಯ ಒಂದು ಭಾಗವನ್ನು ನೀಡಿ ಆಶೀರ್ವಾದ ಮಾಡುತ್ತಾನೆ.
ಅಂಜನಾ ದೇವಿ ಆ ದೈವಿಕ ಸಿಹಿಯನ್ನು ಭಕ್ತಿಯಿಂದ ಸೇವಿಸುತ್ತಾಳೆ ಮತ್ತು ತಕ್ಷಣವೇ ಅವಳು ಶಿವ ಮತ್ತು ವಾಯುದೇವನ ಆಶೀರ್ವಾದವನ್ನು ಪಡೆಯುತ್ತಾಳೆ. "ನೀನು ಬುದ್ಧಿಶಕ್ತಿ, ಧೈರ್ಯ, ಅಪಾರ ಶಕ್ತಿ, ವೇಗ ಮತ್ತು ಹಾರಾಟದ ಶಕ್ತಿಯನ್ನು ಹೊಂದಿರುವ ಮಗನಿಗೆ ತಾಯಿಯಾಗುತ್ತೀಯ" ಎಂದು ವಾಯು ದೇವ ಹೇಳುತ್ತಾನೆ.
ಶೀಘ್ರದಲ್ಲೇ ಅಂಜನಾ ದೇವಿ ವಾನರ ಮುಖದ, ಅಪಾರವಾದ ಶಕ್ತಿ ಇರುವ, ಹಾರಾಡುವ ಸಾಮರ್ಥ್ಯ ಇರುವ ಮಗುವಿಗೆ ಜನ್ಮ ನೀಡುತ್ತಾಳೆ ಮತ್ತು ಅದಕ್ಕೆ ಆಂಜನೇಯ (ಅಂದರೆ 'ಅಂಜನಾಳ ಮಗ' ಎಂದರ್ಥ) ಎಂದು ಹೆಸರಿಡುತ್ತಾಳೆ. ಅಂಜನಾ ದೇವಿ ತನ್ನ ಶಾಪದಿಂದ ಮುಕ್ತಳಾಗಿ ಸ್ವರ್ಗಕ್ಕೆ ಮರಳಲು ಬಯಸುತ್ತಾಳೆ ಮತ್ತು ಅದರಂತೆ ಶಾಪದಿಂದ ವಿಮೋಚನೆ ಪಡೆಯುತ್ತಾಳೆ. ಹನುಮಂತನ ತಂದೆ ಕೇಸರಿ ಆಂಜನೇಯನನ್ನು ನೋಡಿಕೊಂಡು, ಬೆಳೆಸುತ್ತಾರೆ. ಅವನು ಬಲಿಷ್ಠ ಆದರೆ ಚೇಷ್ಟೆಯ ಪುಟ್ಟ ಹುಡುಗನಾಗಿ ಬೆಳೆಯುತ್ತಾನೆ.