ರುಚಿಕರವಾದ ಗರಿಗರಿಯಾದ ಹಲಸಿನ ಹಣ್ಣಿನ ಚಿಪ್ಸ್ ಮನೆಯಲ್ಲೇ ಮಾಡಿ

By ಸುಖೇಶ್ ಶಾನಭಾಗ್ Published: Wednesday, May 28, 2025, 7:49 [IST]

Delicious Jackfruit Chips Recipe

ಹಲಸಿನ ಹಣ್ಣು ಅಂದರೆ ಯಾರಿಗೆ ತಾನೇ ಇಷ್ಟ ಇಲ್ಲಾ ಹೇಳಿ? ಬೇಸಿಗೆ ಕಾಲದಲ್ಲಿ ಆರಂಭವಾಗುವ ಹಲಸಿನ ಹಣ್ಣಿನ ಸೀಸನ್ ಮಳೆಗಾಲದ ಆರಂಭದವರೆಗೂ ಇರತ್ತೆ. ಹಲಸಿನ ಹಣ್ಣಿನ ಸ್ವಾದಿಷ್ಟಕರವಾದ ರುಚಿಯನ್ನು ವರ್ಣಿಸಲು ಅಸಾಧ್ಯ.

ನೀವು ಹಲಸಿನ ಹಣ್ಣಿನ ಇಡ್ಲಿಯನ್ನು ತಿಂದಿರಬಹುದು. ಹಲಸಿನ ಉಪ್ಪಿನಕಾಯಿ, ಹಲಸಿನ ಕಾಯಿಯ ಸಾರು, ಹಲಸಿನ ಸಿಹಿತಿಂಡಿಗಳು ತುಂಬಾ ಪ್ರಸಿದ್ಧವಾದ ಖಾದ್ಯಗಳು. ಹಲಸಿನ ಕಾಯಿಯಿಂದ ತಯಾರಿಸಬಹುದಾದ ಗರಿ ಗರಿಯಾದ ಚಿಪ್ಸ್ ಕೂಡ ಸಂಜೆಯ ಚಹಾ ಅಥವಾ ಸ್ಟ್ರಾಂಗ್ ಆಗಿರುವ ಒಂದು ಗ್ಲಾಸ್ ಕಾಫಿಯ ಜೊತೆಗೆ ತಿನ್ನೋದಕ್ಕೆ ತುಂಬಾನೇ ಚೆನ್ನಾಗಿರತ್ತೆ. 

ಈ ರೀತಿಯಾದ ಗರಿ ಗರಿ ಹಲಸಿನ ಚಿಪ್ಸನ್ನು (Jackfruit Chips ) ಸುಲಭವಾಗಿ ನಿಮ್ಮ ಮನೆಯಲ್ಲೇ ತಯಾರಿಸಿ ಅದರ ರುಚಿಯನ್ನು ಸಂಜೆಯ ಚಹಾದ ಜೊತೆ ಆಸ್ವಾದಿಸಬಹುದು. ಹಲಸಿನ ಚಿಪ್ಸ್ ಅದರ ರುಚಿಯೊಂದಿಗೆ ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿ. ಈ ಲೇಖನದಲ್ಲಿ ನಾವು ನಿಮಗೆ ರುಚಿಕರವಾದ, ಗರಿಗರಿಯಾದ ಹಲಸಿನ ಹಣ್ಣಿನ ಚಿಪ್ಸ್ ಮಾಡುವ ವಿಧಾನದ ಬಗ್ಗೆ ತಿಳಿಸುತ್ತೇವೆ. ನೀವು ಈ ತಿಂಡಿಯನ್ನು ಸುಲಭವಾಗಿ ಮನೆಯಲ್ಲೇ ತಯಾರಿಸಿ  ಅದರ ಸುವಾಸನೆಯ ಜೊತೆಗೆ ರುಚಿಯನ್ನೂ ಸವಿದು ಖುಷಿಪಡಿ. ಮತ್ತೇಕೆ ತಡ..ಬನ್ನಿ, ರುಚಿಕರವಾದ ಹಲಸಿನ ಚಿಪ್ಸ್ ತಯಾರಿಸೋದು ಹೇಗೆ ಅಂತಾ ತಿಳಿಯೋಣ. 

ಹಲಸಿನ ಹಣ್ಣಿನ ಚಿಪ್ಸ್ ಚಹಾ, ಕಾಫಿಯ ಜೊತೆಗೆ ಸವಿಯಬಹುದಾದ ದಕ್ಷಿಣ ಭಾರತದ ಪ್ರಸಿದ್ಧ ಸಂಜೆಯ ತಿಂಡಿಗಳಲ್ಲಿ ಒಂದಾಗಿದೆ. ಇಲ್ಲಿ ನಾವು ನಿಮಗೋಸ್ಕರ ಅದ್ಭುತವಾದ ಮತ್ತು ಸುಲಭವಾದ ಹಲಸಿನ ಹಣ್ಣಿನಿಂದ ಚಿಪ್ಸ್ ತಯಾರಿಸುವ ಹೊಸ ಪಾಕವಿಧಾನವನ್ನು ಪರಿಚಯಿಸಿದ್ದೇವೆ. ಈ ಗರಿಗರಿಯಾದ ಚಿಪ್ಸ್ ಮಳೆಗಾಲದ ಚುಮು ಚುಮು ಚಳಿಗೆ, ಬಿಸಿಬಿಸಿಯಾದ ಚಹಾದ ಜೊತೆಗೆ ನಿಮ್ಮ ಮಕ್ಕಳಿಗೆ ಕೊಡಬಹುದು, ಜೊತೆಗೆ ನೀವೂ ಸಹ ಆಸ್ವಾದಿಸಬಹುದು. 

Delicious Jackfruit Chips Recipe

ಹಲಸಿನ ಹಣ್ಣಿನ ಚಿಪ್ಸ್ ತಯಾರಿಸಲು ಬೇಕಾಗುವ ಪದಾರ್ಥಗಳು 

  • ಹಸಿ ಹಲಸಿನ ಹಣ್ಣು (ಅಂದರೆ ಹಲಸಿನ ಕಾಯಿ) - 500 ಗ್ರಾಂನಷ್ಟು
  • ಎಣ್ಣೆ - ಹುರಿಯಲು ಬೇಕಾದಷ್ಟು ಬಾಣಲೆಗೆ ಹಾಕಿಕೊಳ್ಳಿ 
  • ಉಪ್ಪು - ನಿಮ್ಮ ರುಚಿಗೆ ತಕ್ಕಷ್ಟು
  • ಅರಿಶಿನ - 2 ಟೀ ಚಮಚ  
  • ಕೆಂಪು ಮೆಣಸಿನ ಪುಡಿ - 1 ಟೀ ಚಮಚ 
  • ತಾಜಾ ನಿಂಬೆ ಹಣ್ಣಿನ ರಸ - 3 ಟೀ ಚಮಚ

ಹಲಸಿನ ಹಣ್ಣಿನ ಚಿಪ್ಸ್ ತಯಾರಿಸುವ ಪಾಕ ವಿಧಾನ:

ಮೊದಲು ಹಲಸಿನ ಹಣ್ಣಿನ ಸಿಪ್ಪೆ ತೆಗೆದು, ಅದರ ತೊಳೆಗಳನ್ನು ಒಂದೊಂದಾಗಿ ಬಿಡಿಸಿಕೊಳ್ಳಿ. ಹಲಸಿನ ಹಣ್ಣು ಬಿಡಿಸುವಾಗ ನಿಮ್ಮ ಕೈಗಳಿಗೆ ಸ್ವಲ್ಪ ಎಣ್ಣೆಯನ್ನು ಹಚ್ಚಿಕೊಳ್ಳಿ. ಇಲ್ಲದಿದ್ದರೆ ಹಲಸಿನ ಹಣ್ಣಿನ ಮೇಣ ಕೈಗಳಿಗೆ ಅಂಟಿಕೊಂಡು ತೊಳೆಯಲು ಕಷ್ಟವಾಗುತ್ತದೆ. 

ಬಿಡಿಸಿಕೊಂಡ ಹಲಸಿನ ತೊಳೆಗಳಿಂದ ಬೀಜಗಳನ್ನು ತೆಗೆದು, ಅವುಗಳನ್ನು ತಂಪಾದ ನೀರಿನಲ್ಲಿ 10 -15 ನಿಮಿಷಗಳ ಕಾಲ ನೆನೆಸಿ ಇಡಿ. ಇದರಿಂದ ಹಲಸಿನ ತೊಳೆಗಳಲ್ಲಿ ಇರುವ ಮೇಣ ಹೋಗಿ, ಚಿಪ್ಸ್ ಗರಿಗರಿಯಾಗಲು ಸಹಾಯವಾಗುತ್ತದೆ. ನಂತರ ನೀರನ್ನು ತೆಗೆದು ಹಲಸಿನ ತೊಳೆಗಳನ್ನು ಬಟ್ಟೆಯಲ್ಲಿ ಹಾಕಿ ಚೆನ್ನಾಗಿ ಒಣಗಿಸಿ. ನಂತರ ಈ ತೊಳೆಗಳನ್ನು ಉದ್ದವಾದ ಆಕಾರದಲ್ಲಿ  ಚೂರುಗಳಾಗಿ ಕತ್ತರಿಸಿಕೊಳ್ಳಿ. 

ಇದರ ನಂತರ, ಒಂದು ಬಾಣಲೆಯಲ್ಲಿ ಎಣ್ಣೆಯನ್ನು ಹಾಕಿ ಬಿಸಿ ಮಾಡಿ. ಎಣ್ಣೆ ಬಿಸಿಯಾದ ನಂತರ ನಿಧಾನವಾಗಿ ಒಂದೆಂದೇ ಕತ್ತರಿಸಿಕೊಂಡ ಹಲಸಿನ ಚೂರುಗಳನ್ನು ಬಾಣಲೆಗೆ ಹಾಕಬೇಕು. ನಂತರ ಗೋಲ್ಡನ್ ಬಣ್ಣ ಬರುವವರೆಗೆ ಮತ್ತು ಗರಿಗರಿಯಾಗಿ ಕಾಣಿಸುವವರೆಗೆ ಚೆನ್ನಾಗಿ ಹುರಿಯಬೇಕು. ಹುರಿದ ನಂತರ, ಅವುಗಳನ್ನು ಟಿಶ್ಯೂ ಪೇಪರ್ ಮೇಲೆ ಅಥವಾ ನಾರ್ಮಲ್ ಪೇಪರ್ ಮೇಲೆ ಇರಿಸಬೇಕು.  ಇದರಿಂದ ಸ್ವಲ್ಪ ಎಣ್ಣೆ ಜಾಸ್ತಿ ಅಂಟಿಕೊಂಡಿದ್ದರೆ ಅದು ಹೋಗಲು ಸಹಾಯವಾಗುತ್ತದೆ. ಅದಕ್ಕೆ ಉಪ್ಪು, ಕೆಂಪು ಮೆಣಸಿನ ಪುಡಿಯನ್ನು ಸೇರಿಸಿ. ನಂತರ ನಿಂಬೆ ಹಣ್ಣಿನ ರಸವನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಈಗ ನಿಮ್ಮ ಹಲಸಿನ ಹಣ್ಣಿನ ಚಿಪ್ಸ್ ತಿನ್ನೋದಕ್ಕೆ ರೆಡಿಯಾಗಿದೆ! ಬಿಸಿಬಿಸಿ ಇರುವಾಗಲೇ ತಿಂದು ಎಂಜಾಯ್ ಮಾಡಿ. 

ನಿಮಗೆ ಈ ಆರೋಗ್ಯದ ಸಮಸ್ಯೆಗಳಿದ್ದರೆ ಹಲಸಿನ ಹಣ್ಣು ತಿನ್ನಬೇಡಿ 

  • ನಿಮಗೆ ಮೂತ್ರಪಿಂಡದ ಸಮಸ್ಯೆಯಿದ್ದರೆ ಈ ಹಣ್ಣನ್ನು ಸೇವಿಸಬೇಡಿ. 
  • ಚರ್ಮದ ಸಮಸ್ಯೆ ಅಥವಾ ಸಕ್ಕರೆ ಕಾಯಿಲೆ (ಡಯಾಬಿಟಿಸ್) ಇದ್ದಾರೆ ತಿನ್ನಬಾರದು.
  • ಜೀರ್ಣಕ್ರಿಯೆಯ ತೊಂದರೆ ಇದ್ದರೆ ಸೇವಿಸಬಾರದು. 
  • ಹಲಸಿನ ಹಣ್ಣು ಘನ ಆಹಾರ ಪದಾರ್ಥವಾಗಿದ್ದು ಜೀರ್ಣವಾಗಲು ತುಂಬಾ ಸಮಯ ಬೇಕಾಗುತ್ತದೆ. ಹಾಗಾಗಿ, ಗರ್ಭಿಣಿ ಮಹಿಳೆಯರು ಇದನ್ನು ಸೇವಿಸಬಾರದು. 
By ಸುಖೇಶ್ ಶಾನಭಾಗ್ Published: Wednesday, May 28, 2025, 7:49 [IST]


Scroll to Top